ಕರ್ನಾಟಕ

ರೌಡಿ ಶೀಟರ್ ದೇವು ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

Pinterest LinkedIn Tumblr

Crime-2ಮೈಸೂರು,ಮೇ,22-ರೌಡಿ ಶೀಟರ್ ದೇವು ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ದೇವು ಹತ್ಯೆಗೆ ಸುಪಾರಿ ಪಡೆದಿದ್ದ ಎನ್ನಲಾದ ಸುಪಾರಿ ಕಿಲ್ಲರನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿನಲ್ಲಿ ಇಂದು ವಿಚಾರಣೆಗೊಳಪಡಿಸಿದ್ದಾರೆ.
ಮೇ. 5 ರಂದು ಪಡುವಾರಹಳ್ಳಿಯ ರೌಡಿ ಶೀಟರ್ ದೇವುನನ್ನು ಬೆಳ್ಳಂಬೆಳಗ್ಗೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿದ ಮರುದಿನ ನಾವೇ ಹತ್ಯೆ ಮಾಡಿದ್ದೇವೆ ಎಂದು 6 ಜನ ಸ್ಥಳೀಯ ಯುವಕರು ಪೊಲೀಸರ ಮುಂದೆ ಶರಣಾಗಿದ್ದರು ಎನ್ನಲಾಗಿತ್ತು.
ಅವರೇ ನಿಜವಾದ ಕೊಲೆಗಾರರೇ ಎಂಬ ಅನುಮಾನವಿತ್ತು. ಆದರೆ ಆ ಅನುಮಾನ ಇದೀಗ ನಿಜವಾಗಿದ್ದು, ಹಂತಕರೆಂದು ಶರಣಾಗಿದ್ದವರು ಹಂತಕರಲ್ಲ ಎಂಬುದು ಖಚಿತವಾಗಿದೆ ಎನ್ನಲಾಗಿದೆ. ಬೆಂಗಳೂರಿನ ಸುಪಾರಿ ಕಿಲ್ಲರ್ ವಡ್ಡನಾಗ ಮತ್ತು ಅವರ ತಂಡದವರು ನಿಜವಾದ ಹಂತಕರು ಎಂದು ಹೇಳಲಾಗುತ್ತಿದೆ. ನಿನ್ನೆ ವಡ್ಡನಾಗನನ್ನ ಮೈಸೂರು ಪೊಲೀಸರು ಬೆಂಗಳೂರಿನ ನ್ಯಾಯಾಲಯದಲ್ಲಿ ಅನುಮತಿ ಪಡೆದು 11 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.
17 ಕೊಲೆ ಮಾಡಿರುವ ಸುಪಾರಿ ಕಿಲ್ಲರ್ ವಡ್ಡನಾಗ:
ದೇವು ಹತ್ಯೆ ಮಾಡಲು ಸುಪಾರಿ ಪಡೆದಿದ್ದ ವಡ್ಡನಾಗ ಒಬ್ಬ ಸುಪಾರಿ ಹಂತಕ. ಇಲ್ಲಿಯವರೆಗೆ 17ಕ್ಕೂ ಹೆಚ್ಚು ಕೊಲೆ ಮಾಡಿದ್ದಾನೆ. ಈತ ದೇವು ಹತ್ಯೆಮಾಡಲು ಸುಪಾರಿ ಪಡೆದಿದ್ದ ಎನ್ನಲಾಗಿದೆ. ಅದರಂತೆ ಮೇ 5ರಂದು ಪಡುವಾರಹಳ್ಳಿಯ ಮಾರಿಗುಡಿ ದೇವಸ್ಥಾನ ಮುಂಭಾಗದಲ್ಲಿ ದೇವು ಸ್ನೇಹಿತರ ಜೊತೆ ಮಾತನಾಡುತ್ತ ಕುಳಿತ್ತಿದ್ದಾಗ ವಡ್ಡನಾಗ ತನ್ನ ತಂಡದ ಜೊತೆ ಜೀಪ್ ಮತ್ತು ಬೈಕ್‍ನಲ್ಲಿ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಈ ಕೊಲೆಯ ಪ್ರಮುಖ ಆರೋಪಿಗಳನ್ನ ರಕ್ಷಿಸಲು ಹಾಗೂ ತನಿಖೆ ದಿಕ್ಕನ್ನು ತಪ್ಪಿಸಲು ಆರು ಜನ ಸ್ಥಳೀಯ ಯುವಕರು ನಾವೇ ಕೊಲೆ ಮಾಡಿದ್ದೇವೆಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು. ಆದರೆ ಶರಣಾದವರನ್ನ ಮೈಸೂರು ನಗರ ಪೊಲೀಸ್ ಕಮೀಷನರ್ ದಯಾನಂದ್, ಗುಪ್ತ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾಗ ಸುಪಾರಿ ಕಿಲ್ಲರ್ ವಡ್ಡನಾಗಾ ಹೆಸರು ಕೇಳಿ ಬಂದಿತು. ತಕ್ಷಣ ವಡ್ಡನಾಗ ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಿ ಜೈಲು ಸೇರಿದ್ದ.
ಇತನನ್ನ ಬಾಡಿ ವಾರೆಂಟ್ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ನಿನ್ನೆ ಮೈಸೂರು ಪೊಲೀಸರು 11 ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ರೌಡಿ ಶೀಟರ್ ಹತ್ಯೆಯಲ್ಲಿ ಭಾಗವಹಿಸಿದ್ದ ಸುಪಾರಿ ಕಿಲ್ಲರ್ ತಂಡದ ಇತರರನ್ನು ಬಂಧಿಸಲು ಪೊಲೀಸರು ಬೆಂಗಳೂರು, ಹೈದಾರಬಾದ್‍ಗೆ ತೆರಳಿದ್ದಾರೆ ಎಂದು ತಿಳಿದರು.

Comments are closed.