ಕರ್ನಾಟಕ

ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ ಹಳೆ ವಿದ್ಯಾರ್ಥಿ !

Pinterest LinkedIn Tumblr

swami

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೀವರಸಾಯನ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಂ.ಸ್ವಾಮಿ ಅವರನ್ನು ಕಚೇರಿಯಲ್ಲಿಯೇ ಇದೇ ವಿಭಾಗದಲ್ಲಿ ಕಲಿತ ಹಳೆಯ ವಿದ್ಯಾರ್ಥಿಯೊಬ್ಬ ಥಳಿಸಿದ ಘಟನೆ ಶನಿವಾರ ನಡೆದಿದೆ.

ಈ ಸಂಬಂಧ ಮಹೇಂದ್ರ ರಾಯ್ಕರ್ ಎಂಬುವವರ ವಿರುದ್ಧ ಪ್ರೊ. ಸ್ವಾಮಿ ಕವಿವಿಗೆ ದೂರು ನೀಡಿದ್ದಾರೆ. ‘ಮಹೇಂದ್ರ 2014ರಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಯಾಗಿದ್ದ. ಆ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಈತ, ಪ್ರಸಕ್ತ ವರ್ಷ ಪರೀಕ್ಷೆ ಕಟ್ಟಿ ಪಾಸಾಗಿದ್ದ.

ಶನಿವಾರ ಮಧ್ಯಾಹ್ನ ವಿಭಾಗಕ್ಕೆ ಬಂದ ಮಹೇಂದ್ರ, ವಿಭಾಗದ ಮತ್ತೊಬ್ಬ ಪ್ರಾಧ್ಯಾಪಕ ಡಾ.ವಿಶ್ವನಾಥ ಚಚಡಿ ಎಂಬುವವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಲು ಮುಂದಾದ. ಇದನ್ನು ತಡೆಯಲು ನಾನು ಮುಂದಾದಾಗ ಕುರ್ಚಿಯಿಂದ ಹಲ್ಲೆ ನಡೆಸಿದ್ದಾನೆ’ ಎಂದು ಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.

‘ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಇದೇ ಸಂದರ್ಭದಲ್ಲಿ ನನ್ನ ಮೇಲಿನ ಹಲ್ಲೆಯನ್ನು ತಪ್ಪಿಸಲು ಯತ್ನಿಸಿದ ವಿದ್ಯಾರ್ಥಿನಿಯ ಮೇಲೂ ಆತ ಹಲ್ಲೆ ನಡೆಸಿದ್ದಾನೆ. ಮಹೇಂದ್ರ ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದ ಎಂಬುದು ನಮಗೆ ಗೊತ್ತಿದೆ. ಆದರೆ, ಏಕಾಏಕಿ ನನ್ನ ಮೇಲೆ ಏಕೆ ಹಲ್ಲೆ ಮಾಡಿದ ಎಂಬುದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ಕವಿವಿಯಲ್ಲಿ ಪ್ರಾಧ್ಯಾಪಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಈ ಕುರಿತಂತೆ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಸಿದರೂ ಘಟಿಕೋತ್ಸವ ಇರುವುದರಿಂದ ನಂತರ ನೋಡೋಣ ಎಂದರು’ ಎಂದು ಪ್ರೊ. ಸ್ವಾಮಿ ಪತ್ರಕರ್ತರ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಪ್ರೊ. ಪ್ರಮೋದ ಗಾಯಿ, ‘ಹಲ್ಲೆ ನಡೆಸಿದ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾದವನು. ಹಲ್ಲೆ ನಡೆದ ತಕ್ಷಣ ಪೊಲೀಸರು ಆತನನ್ನು ಕರೆದುಕೊಂಡು ಹೋಗಿದ್ದಾರೆ. ವಿ.ವಿ ಈ ಕುರಿತು ಕ್ರಮ ಕೈಗೊಳ್ಳಲಿದೆ’ ಎಂದರು.

Comments are closed.