ಕರ್ನಾಟಕ

ಕುವೈತ್‌ನಲ್ಲಿ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರಿನ ಮಹಿಳೆ ! ತಾಯ್ನಾಡಿಗೆ ಬರಲು ಪಡುತ್ತಿದ್ದಾರೆ ಕಷ್ಟ

Pinterest LinkedIn Tumblr

shakeela bashir

ಬೆಂಗಳೂರು: ಮನೆಗೆಲಸ ಅರಸಿ ದೂರದ ಕುವೈತ್‌ಗೆ ಹೋಗಿದ್ದ ಬೆಂಗಳೂರಿನ ಮಹಿಳೆಯೊಬ್ಬರು ವಾಪಸ್‌್ ತಾಯ್ನಾಡಿಗೆ ಬರಲಾಗದೆ ಅನಾಥ ಸ್ಥಿತಿಯಲ್ಲಿದ್ದಾರೆ. ಹೆಬ್ಬಾಳ ಭೂಸಂದ್ರ ನಿವಾಸಿ ಶಕೀಲಾ ಬಸೀರ್‌ಅಹ್ಮದ್‌(60) ಎಂಬುವವರು 2007ರಲ್ಲಿ ಕುವೈತ್‌ಗೆ ಹೋಗಿದ್ದು, ಮರಳಿ ಭಾರತಕ್ಕೆ ಬರಲು ಐದು ತಿಂಗಳಿನಿಂದ ಕಷ್ಟಪಡುತ್ತಿದ್ದಾರೆ.

ಭಾರತಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಶಕೀಲಾ ಬಳಿ ಇದ್ದ ಪಾಸ್‌ಪೋರ್ಟ್‌ಹಾಗೂ ₹60 ಸಾವಿರ ಪಡೆದಿರುವ ಆಂಧ್ರಪ್ರದೇಶ ಮೂಲದ ಬಾಷಾ ಎಂಬ ಏಜೆಂಟ್‌ನಾಪತ್ತೆಯಾಗಿದ್ದಾರೆ.

  ‘ತಾಯಿ ಶಕೀಲಾ ಅವರ ಬಳಿ ಇದ್ದ ಪಾಸ್‌ಪೋರ್ಟ್‌ಹಾಗೂ ಇತರೆ ದಾಖಲೆ ಪಡೆದು ಏಜೆಂಟ್‌ಬಾಷಾ ವಂಚಿಸಿದ್ದಾರೆ. ಜತೆಗೆ ಎಷ್ಟೇ ಕರೆ ಮಾಡಿದರೂ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದು ಪುತ್ರ ಜಮೀರ್‌ ತಿಳಿಸಿದರು.

‘ಶಕೀಲಾ ಅವರನ್ನು 2005ರಲ್ಲಿ ಸಂಪರ್ಕಿಸಿದ್ದ ಏಜೆಂಟ್‌ಬಾಷಾ, ಕುವೈತ್‌ನಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ. ಸಂಬಳವೂ ಹೆಚ್ಚು ಎಂದು ನಂಬಿಸಿ, ಪಾಸ್‌ಪೋರ್ಟ್‌ಹಾಗೂ ವೀಸಾ ಮಾಡಿಸಿಕೊಟ್ಟಿದ್ದರು. ಕುವೈತ್‌ಗೆ ಹೋಗಿದ್ದ ಶಕೀಲಾ, ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿಯ ಕಿರುಕುಳದಿಂದಾಗಿ ಎರಡು ಬಾರಿ ಕೆಲಸದ ಸ್ಥಳ ಬದಲಾಯಿಸಿದ್ದಾರೆ. ಅಂಥ ಕಷ್ಟದಲ್ಲೂ ಕುಟುಂಬ ನಿರ್ವಹಣೆಗೆ ಹಣ ಕಳುಹಿಸುತ್ತಿದ್ದರು’ ಎಂದು ತಿಳಿಸಿದರು.

‘ನಮಗೆ ತಂದೆ ಇಲ್ಲ. ತಾಯಿ ಕುವೈತ್‌ಗೆ ಹೋಗಿದ್ದರಿಂದ ನಾನು, ತಂಗಿ, ಸಹೋದರ ಒಟ್ಟಾಗಿ ವಾಸಿಸುತ್ತಿದ್ದೇವೆ. 5 ತಿಂಗಳ ಹಿಂದೆ ತಂಗಿ ಫಾತಿಮಾ ಅವರ ಮದುವೆ ನಿಶ್ಚಯವಾಗಿದೆ. ಗಂಡಿನ  ಮನೆಯವರು  ಬೇಗನೇ ಮದುವೆ ಮಾಡಿಕೊಡುವಂತೆ  ಹೇಳುತ್ತಿದ್ದಾರೆ.  ತಾಯಿ ಕುವೈತ್‌ನಲ್ಲಿರುವುದರಿಂದ ಮದುವೆ ಮುಂದೂಡುತ್ತ ಬರುತ್ತಿದ್ದೇವೆ.

‘ಬೆಂಗಳೂರಿಗೆ ಬರುವುದಾಗಿ ಶಕೀಲಾ ಅವರು ಜನವರಿಯಲ್ಲಿ ತಿಳಿಸಿದ್ದರು. ಅದೇ ತಿಂಗಳು ಮದುವೆ ಇಟ್ಟುಕೊಂಡಿದ್ದೇವು. ಆದರೆ ಏಜೆಂಟ್‌ ವಂಚಿಸಿದ್ದರಿಂದ ಬರಲು ಆಗಲಿಲ್ಲ. ಏಪ್ರಿಲ್‌ನಲ್ಲಿ ಪುನಃ ಮದುವೆ ದಿನಾಂಕ ನಿಗದಿಪಡಿಸಿದ್ದೇವು. ಆದರೆ ನಮ್ಮ ತಾಯಿ ಆ ತಿಂಗಳೂ ಬರಲಿಲ್ಲ. ಕುವೈತ್‌ನಿಂದ ಕರೆ ಮಾಡಿದ್ದ ತಾಯಿ, ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನೀವು ಹೇಗಾದರೂ ಮಾಡಿ ನನ್ನನ್ನು ಕರೆದುಕೊಂಡು ಹೋಗಿ ಎಂದು ಗೋಗರೆದರು’ ಎಂದು ಅವರು ಕಣ್ಣೀರಿಟ್ಟರು.

‘ಕುವೈತ್‌ಗೆ ಹೋದ ಎಂಟು ವರ್ಷಗಳಲ್ಲಿ ಎರಡು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಶಕೀಲಾ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಡಲು ಅಲ್ಲಿಯ ಮನೆ ಮಾಲೀಕರು ಒಪ್ಪಿದ್ದಾರೆ.  ಆದರೆ ಏಜೆಂಟ್‌ಮಾಡಿದ ವಂಚನೆಯಿಂದ ತಾಯ್ನಾಡಿಗೆ ಬರಲು ಆಗುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಕೆಲ ದಿನದ ಹಿಂದೆ ಕರೆ ಮಾಡಿದ್ದ ತಾಯಿ, ಹೊಸ ಪಾಸ್‌ಪೋರ್ಟ್‌ಮಾಡಿಸಬೇಕು. ವಿಮಾನ ಟಿಕೆಟ್‌ಪಡೆಯಬೇಕು ಎಂದು ಹೇಳಿದ್ದರು. ಆದರೆ ಕುವೈತ್‌ನಲ್ಲಿ ನಮಗೆ ಯಾರೂ ಪರಿಚಯವಿಲ್ಲ. ಅವರು ಕುವೈತ್‌ನ ಯಾವ ಸ್ಥಳದಲ್ಲಿದ್ದಾರೆ ಎಂಬುದು ಸಹ ಗೊತ್ತಿಲ್ಲ. ಹೀಗಾಗಿ     ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್‌ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದೇವೆ’ ಎಂದು ಜಮೀರ್‌್ ವಿವರಿಸಿದರು.

Comments are closed.