ಕರ್ನಾಟಕ

೧೨೦೦ ಕೈಗಾರಿಕಾ ವಸಾಹತು ಸ್ಥಾಪನೆ

Pinterest LinkedIn Tumblr

gurappanaidu-1ಬೆಂಗಳೂರು, ಮೇ ೨೧- ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಕಳೆದ ಒಂದು ವರ್ಷದಲ್ಲಿ ೧೨೦೦ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಿದ್ದು, ಈ ಸ್ಥಳದಲ್ಲಿ ಈಗಾಗಲೇ ಕೆಲಸಗಳು ಆರಂಭಗೊಂಡಿವೆ.
ಮುಂದಿನ ಎರಡು ವರ್ಷಗಳಲ್ಲಿ ೨ ಸಾವಿರ ಕೈಗಾರಿಕೆಗಳಿಗೆ ನಿವೇಶನಗಳನ್ನು ಹಂಚುವ ಗುರಿ ಹೊಂದಲಾಗಿದೆ ಎಂದು ನಿಗಮದ ಅಧ್ಯಕ್ಷ ಡಾ. ವಿ. ಗುರಪ್ಪ ನಾಯ್ಡು ತಿಳಿಸಿದ್ದಾರೆ.
ರಾಜ್ಯಾದ್ಯಂತ ೨ ಸಾವಿರ ಎಕರೆ ಜಮೀನಿಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ ೬೦೦ ಎಕರೆ ಜಮೀನು ಸ್ವಾಧೀನ ಮಾಡಲಾಗಿದ್ದು, ೪೦೦ ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ನೇರವಾಗಿ ಜಮೀನು ಸ್ವಾಧೀನ
ಇದುವರೆಗೆ ಕೆಐಎಡಿಬಿ ರೈತರಿಂದ ಜಮೀನನ್ನು ಸ್ವಾಧೀನಪಡಿಸಿಕೊಂಡು ನಮ್ಮ ನಿಗಮಕ್ಕೆ ನೀಡುತ್ತಿತ್ತು. ಆದರೆ ಇನ್ನುಮುಂದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆ ೧೦೯ ನಿಯಮದಡಿ ನೇರವಾಗಿ ನಿಗಮವೇ ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಪ್ರಸ್ತಾಪ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಗೆ ಬರಲಿದ್ದು, ಅಲ್ಲಿ ಅನುಮೋದನೆ ದೊರೆತರೆ, ರಾಜ್ಯದ ವಿವಿಧೆಡೆ ೬೫೦ ಎಕರೆ ಜಮೀನನ್ನು ಖರೀದಿಸಿ ಹೊಸ ಕೈಗಾರಿಕೆಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಮೂರು ಬಾರಿ ನಿರ್ಣಯ ಕೈಗೊಂಡರೂ ನಡೆಯದ ಸಿಐಡಿ ತನಿಖೆ
ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ೨೦೦ ಕೋಟಿ ರೂ. ಮೌಲ್ಯದ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ನಿಗಮದ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಈ ಬಗ್ಗೆ ನಿಗಮದ ಮೂರು ಬೋರ್ಡ್ ಮೀಟಿಂಗ್‌ಗಳಲ್ಲೂ ಚರ್ಚೆ ನಡೆದು ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ಇರುವ ಕೆಲವರಿಂದಾಗಿ ಇನ್ನೂ ಸಿಐಡಿಗೆ ವಹಿಸಲು ಸಾಧ್ಯವಾಗಿಲ್ಲ ಎಂದು ಡಾ. ಗುರಪ್ಪ ನಾಯ್ಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಳಂಬಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಿಐಡಿಗೆ ವಹಿಸುವಂತೆ ಸೂಚಿಸಿದ್ದಾರೆ. ನ್ಯಾಯಾಂಗ ತನಿಖೆ ಮತ್ತು ಸಿಐಡಿ ತನಿಖೆ ನಡೆಸುವಂತೆಯೂ ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮಾತ್ರವಲ್ಲ, ೧೯ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಮೂರು ಮಂದಿ ಐಎಎಸ್ ಅಧಿಕಾರಿಗಳು ನೀಡಿರುವ ವರದಿಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕೈಗಾರಿಕೆ ಹೆಸರಿನಲ್ಲಿ ನಿವೇಶನ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ೩೪ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಇದಕ್ಕೆ ಬಿಡಿಎ ಮತ್ತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಅಂತಹವರ ಪರವಾನಗಿ ರದ್ದುಪಡಿಸುವಂತೆ ಮನವಿ ಮಾಡಲಾಗಿದೆ.ಕೈಗಾರಿಕೆಗಳಿಗೆ ನಿವೇಶನ ಪಡೆದು, ಕೆಲವರು ಶಾಲೆ, ಕಾಲೇಜು, ಹೋಟೆಲ್, ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದಾರೆ. ಇಂತಹವರಿಗೆ ನೋಟೀಸ್ ಕಳುಹಿಸಿ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ದುಂಡು ಮೇಜಿನ ಸಭೆ
ಕೈಗಾರಿಕೋದ್ಯಮಿಗಳ ಸಭೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ದುಂಡು ಮೇಜಿನ ಸಭೆ ಏರ್ಪಡಿಸಲಾಗಿದೆ. ಇದರಲ್ಲಿ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು, ಅಧಿಕಾರಿಗಳು, ತಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Comments are closed.