ಅಂತರಾಷ್ಟ್ರೀಯ

ವೈಟ್‌ಹೌಸ್‌ಗೆ ಲಗ್ಗೆ : ವಾಷಿಂಗ್‌ಟನ್‌ನಲ್ಲಿ ಅಪರಿಚಿತನ ಕೈಚಳಕ-ಎಲ್ಲೆಲ್ಲೂ ದಿಗ್ಭ್ರಮೆ

Pinterest LinkedIn Tumblr

21whitehouseವಾಷಿಂಗ್‌ಟನ್, ಮೇ ೨೧- ಕೈಯಲ್ಲಿ ಬಂದೂಕು ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ನಿಲ್ಲುವಂತೆ ಸೂಚಿಸಿದರೂ ಕೇಳದೆ ಹೋಗಿದ್ದರಿಂದ ಭದ್ರತಾಪಡೆಯವರ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಶ್ವೇತಭವನದ ಹೊರಗೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧಿಕೃತ ನಿವಾಸಕ್ಕೆ ಒಂದು ಘಂಟೆ ಕಾಲ ಬೀಗ ಜಡಿಯಲಾಗಿತ್ತು.
ಅಮೆರಿಕದ ಕಾಲಮಾನದ ಪ್ರಕಾರ ನಿನ್ನೆ ಮಧ್ಯಾಹ್ನ 3.06 ಗಂಟೆ ಸುಮಾರಿಗೆ ಘಟನೆ ನಡೆಯಿತು. ಶ್ವೇತಭವನಕ್ಕೆ ಸಾರ್ವಜನಿಕರಿಗೆ ಪ್ರವೇಶಾವಕಾಶ ನೀಡುವ `ಇ ಬೀದಿ’ಯ ಬಳಿ ಒಬ್ಬ ವ್ಯಕ್ತಿ ಕೈಯಲ್ಲಿ ಬಂದೂಕು ಝಳಪಿಸಿಕೊಂಡು ಮುನ್ನುಗ್ಗುತ್ತಿದ್ದ. ಆಗ ಅಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ರಹಸ್ಯ ಸೇವಾ ಏಜೆಂಟ್‌ರು ಆತನಿಗೆ ನಿಲ್ಲುವಂತೆ ಕೂಗಿ ಎಚ್ಚರಿಕೆ ನೀಡಿದರು. ಆದರೆ ಆತ ಅವರ ಆದೇಶ ಪಾಲಿಸಲು ನಿರಾಕರಿಸಿದ್ದರಿಂದ ಅವನತ್ತ ಒಂದು ಸಲ ಗುಂಡು ಹಾರಿಸಲಾಯಿತು ಎಂದು ಅಧಿಕೃತ ವಕ್ತಾರರು ಘಟನೆಯ ಬಗ್ಗೆ ವಿವರ ಒದಗಿಸಿದರು.

ಅಪರಿಚಿತ ವ್ಯಕ್ತಿಯನ್ನು ಭದ್ರತಾ ಪಡೆ ಸಿಬ್ಬಂದಿ ಕೂಡಲೇ ಬಂಧಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳದಿಂದ ಒಂದು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಶ್ವೇತಭವನವನ್ನು ಎಲ್ಲ ದ್ವಾರಗಳಿಂದ ಮುಚ್ಚಿ ಕಾವಲು ಪಡೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಸ್ವಯಂಛಾಲಿತ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಭದ್ರತಾ ಸಿಬ್ಬಂದಿಯನ್ನು ಪಹರೆ ಕಾರ್ಯಕ್ಕೆ ತೊಡಗಿಸಲಾಯಿತು.
ತೀಕ್ಷ್ಣ ಗುರಿಕಾರರು ಶ್ವೇತಭವನದ ಛಾವಣಿಯನ್ನೇರಿ ಆಯಕಟ್ಟಿನ ಸ್ಥಳಗಳಲ್ಲಿ ಬಂದೂಕಿನಿಂದ ಗುರಿ ಇಟ್ಟುಕೊಂಡು ಸನ್ನದ್ಧರಾಗಿರುವುದು ಕಂಡು ಬಂದಿತು.
ಭದ್ರತೆಯ ಭರಾಟೆಗೆ ಪೆನ್ನಿಸಿಲ್ಪೇನಿಯಾ ಅವೆನ್ಯೂನಲ್ಲಿ ಸಾರ್ವಜನಿಕರು ಭಯಭೀತಿಯಿಂದ ಅರಚುತ್ತಿರುವುದು ಕೇಳಿ ಬಂತು.
ಗುಂಡಿನ ದಾಳಿಯ ಪ್ರಕರಣ ನಡೆದಾಗ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಇರಲಿಲ್ಲ. ಅವರು ಗಾಲ್ಫ್ ಆಡಲು ಆಂಡ್ರೀವ್ಸ್ ವಾಯುನೆಲೆ ಮೈದಾನಕ್ಕೆ ತೆರಳಿದ್ದರು.
ಶ್ವೇತಭವನ ಸಮುಚ್ಛಯದಲ್ಲಿ ಆಗ ಇದ್ದ ಉಪಾಧ್ಯಕ್ಷ ಜೋ ಬಿಡೆನ್ ಅವರತ್ತ ಧಾವಿಸಿದ ಭದ್ರತಾ ಸಿಬ್ಬಂದಿ ಅವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿತು.
ಘಟನಾ ಸ್ಥಳದ ಹತ್ತಿರದಲ್ಲೇ ಅಲ್ಲಿಗೆ ಬರಲು ಆ ವ್ಯಕ್ತಿ ಬಳಸಿರುವ ಕಾರು ಪತ್ತೆಯಾಗಿದ್ದು, 22 ಸಾಮರ್ಥ್ಯದ ಶಸ್ತ್ರಾಸ್ತ್ರಕ್ಕೆ ಬಳಸುವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ಘಟನೆಯ ವ್ಯಕ್ತಿಗೂ ಭಯೋತ್ಪಾದಕ ಸಂಘಟನೆಗಳಿಗೂ ಯಾವುದೇ ರೀತಿಯ ನಂಟು ಇಲ್ಲ ಎಂದು ದೃಢಪಟ್ಟಿದೆ. ಆದಾಗ್ಯೂ ಇಂಥ ಕೃತ್ಯಕ್ಕೆ ಮುಂದಾಗುವುದಕ್ಕೆ ಆತನಿಗೆ ಇರಬಹುದಾದ ಉದ್ದೇಶಗಳ ಬಗ್ಗೆ ಸವಿಸ್ತಾರವಾದ ತನಿಖೆಯನ್ನು ಮುಂದುವರೆಸಲಾಗಿದೆ.
ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಸಂಬಂಧಿಸಿದ ಯಾರೂ ಕೂಡ ಗಾಯಗೊಂಡಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಹೀಗೆ ಶ್ವೇತಭವನಕ್ಕೆ ನುಗ್ಗಿ ಹೋಗುವ 3-4 ವಿಫಲ ಪ್ರಯತ್ನಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

Comments are closed.