ಕರ್ನಾಟಕ

ಬಾಡಿಗೆ ನೀಡದ ಸರ್ಕಾರಿ ಕಚೇರಿಗಳಿಗೆ ಬಿಬಿಎಂಪಿ ಬೀಗ

Pinterest LinkedIn Tumblr

21j8clrಬೆಂಗಳೂರು, ಮೇ ೨೧- ಕಳೆದ ಹಲವಾರು ವರ್ಷಗಳಿಂದ ಬಿಬಿಎಂಪಿಗೆ ಬಾಡಿಗೆ ಪಾವತಿಸದೆ ಸತಾಯಿಸುತ್ತಿದ್ದ ಸುಮಾರು ೧೨ಕ್ಕೂ ಹೆಚ್ಚು ವಿವಿಧ ಸರ್ಕಾರಿ ಮತ್ತು ಅರೆಸರ್ಕಾರಿ ಸಂಸ್ಥೆಗಳ ಕಚೇರಿಗಳಿಗೆ ಇಂದು ಬೆಳಿಗ್ಗೆ ಬಿಬಿಎಂಪಿ ಪಶ್ಚಿಮ ಮತ್ತು ದಕ್ಷಿಣ ವಲಯಗಳ ಕಂದಾಯ ಅಧಿಕಾರಿಗಳು ಬೀಗ ಹಾಕುವ ಮೂಲಕ ವಶಕ್ಕೆ ತೆಗೆದುಕೊಂಡಿದ್ದಾರೆ.
ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿನ ೧೨ಕ್ಕೂ ಹೆಚ್ಚು ಅಂಗಡಿಗಳಿಂದ ಸುಮಾರು ೬ ಕೋಟಿ ರೂ. ಗೂ ಹೆಚ್ಚು ಬಾಡಿಗೆ ಹಣ ಪಾವತಿಯಾಗಿರಲಿಲ್ಲ. ಹಲವಾರು ನೋಟೀಸ್‌ಗಳನ್ನು ನೀಡಿದ್ದರೂ, ಈ ಕಚೇರಿಗಳಿಂದ ಬಾಡಿಗೆ ಹಣ ಪಾವತಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಕಚೇರಿಗಳಿಗೆ ಬೀಗ ಹಾಕಿ ನೋಟೀಸ್ ಅಂಟಿಸಿದ್ದಾರೆ.
ಪಶ್ಚಿಮ ವಲಯದಲ್ಲಿನ ಯಶವಂತಪುರದಲ್ಲಿ ಆರ್.ಟಿ.ಒ. ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಎರಡು ವರ್ಷಗಳಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಬಾಡಿಗೆಯನ್ನು ನೀಡಿರಲಿಲ್ಲ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆರ್.ಟಿ.ಒ. ಕಚೇರಿಗೆ ಬೀಗ ಹಾಕಿದ್ದಾರೆ.
ಇದೇ ವೇಳೆ ಲಿಡ್‌ಕರ್, ಕಾವೇರಿ ಹ್ಯಾಂಡ್‌ಲೂಮ್, ಬಿಎಸ್‌ಎನ್‌ಎಲ್, ಪ್ರಿಯದರ್ಶಿನಿ ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ಈ ಮಳಿಗೆಗಳು ಸುಮಾರು ೪೦ ಲಕ್ಷ ರೂ. ಗಳ ಬಾಡಿಗೆಯನ್ನು ಬಿಬಿಎಂಪಿಗೆ ಪಾವತಿಸಿರಲಿಲ್ಲ ಎಂದು ಸಹಾಯಕ ಕಂದಾಯ ಅಧಿಕಾರಿ ಭಾರತಿಯವರು ತಿಳಿಸಿದ್ದಾರೆ. ದಕ್ಷಿಣ ವಲಯದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬಿಬಿಎಂಪಿಯಿಂದ ಬಾಡಿಗೆ ಪಡೆದಿರುವ ಎನ್.ಟಿ.ಸಿ. ಲಿಡ್‌ಕರ್, ಜಲಮಂಡಳಿ, ಮಹಿಳಾ ಅಭಿವೃದ್ಧಿ ಕಚೇರಿ, ಸಣ್ಣ ನೀರಾವರಿ, ಕೆ.ಎಸ್.ಎಫ್.ಸಿ. ಜನತಾ ಬಜಾರ್ ಹಾಗೂ ಪ್ರಿಯದರ್ಶಿನಿ ಹ್ಯಾಂಡ್‌ಲೂಮ್ ಮಳಿಗೆಗಳಿಂದಲೂ ಸುಮಾರು ೪ ಕೋಟಿ, ೫೧ ಲಕ್ಷದ, ೪೮ ಸಾವಿರದ ೫೬೮ ಬಾಡಿಗೆ ಹಣವನ್ನು ಈ ಸರ್ಕಾರಿ ಸಂಸ್ಥೆಗಳು ಕಟ್ಟಿರಲಿಲ್ಲ.
ಈ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಲಾಗಿದೆ ಎಂದು ಪಶ್ಚಿಮ ವಲಯದ ಸಹಾಯಕ ಕಂದಾಯ ಅಧಿಕಾರಿ ಲೀಲಾವತಿಯವರು ತಿಳಿಸಿದ್ದಾರೆ.
ಈ ಮಧ್ಯೆ ಸಣ್ಣ ನೀರಾವರಿ ಕಚೇರಿಯ ಮುಖ್ಯಸ್ಥರು ಮಂಗಳವಾರದೊಳಗೆ ೪೯ ಲಕ್ಷ ಬಾಡಿಗೆ ಹಣದ ಪೈಕಿ ೩೨ ಲಕ್ಷ ಹಣವನ್ನು ಮಂಗಳವಾರದೊಳಗೆ ಕಟ್ಟುವುದಾಗಿ ಬರವಣಿಗೆ ಮೂಲಕ ಬರೆದುಕೊಟ್ಟ ಹಿನ್ನೆಲೆಯಲ್ಲಿ ಆ ಕಚೇರಿಯ ಬೀಗವನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ನಂತರ ಕಲಾಸಿಪಾಳ್ಯ, ಎಪಿಎಂಸಿ ಕಚೇರಿಗಳಿಗೂ ಬೀಗ ಹಾಕಲಾಗಿದೆ.

Comments are closed.