
ಬೆಂಗಳೂರು: ನಟ ರವಿಚಂದ್ರನ್ ಅವರ ಮುಂದಿನ ಚಿತ್ರ ‘ಅಪೂರ್ವ’ ಮುಂದಿನ ವಾರ ಬಿಡುಗಡೆಗೆ ಸಿದ್ಧವಾಗಿದ್ದು, 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವೆ ಸುತ್ತುವ ಕಥೆಯುಳ್ಳ ಈ ಸಿನೆಮಾ ಸಂಪೂರ್ಣಗೊಳಿಸಲು 30 ತಿಂಗಳು ಹಿಡಿಯಿತಂತೆ.
ದೀರ್ಘಕಾಲದ ನಂತರ ತಮಗೆ ಸಂಪೂರ್ಣ ಸಂತಸ ನೀಡಿದ ಚಿತ್ರ ‘ಅಪೂರ್ವ’ ಎನ್ನುವ ನಟ-ನಿರ್ದೇಶಕ ರವಿಚಂದ್ರನ್ “ಇದು ಅನುಭವದ ಮತ್ತು ಮುಗ್ಧತೆಯ ಕಥೆ. ನಮ್ಮ ಸದ್ಯದ ಪರಿಸ್ಥಿತಿಯ ಪ್ರಕಾರ ನಾವು ಮುಂದಿನ ನಡೆಗಳನ್ನು ಇಡುತ್ತೇವೆ. ಹಾಗೆಯೇ ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮಕಥೆಯಲ್ಲಿ ಸನ್ನಿವೇಶಗಳನ್ನು ಹೆಣೆಯಲಾಗಿದೆ.
ಇಲ್ಲಿ ಪರುಷ ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಈಗಷ್ಟೇ ಹೊರಜಗತ್ತಿಗೆ ಕಾಲಿಡುತ್ತಿದ್ದಾಳೆ – ಮತ್ತು ಇಬ್ಬರ ನಡುವಿನ ಸಂಬಧವನ್ನು ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ. ಇವರಿಬ್ಬರು ಒಟ್ಟಿಗೆ ಹೊರಜಗತ್ತಿಗೆ ಬಂದಾಗ, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಎಂಬುದು ‘ಅಪೂರ್ವ’ ಸಿನೆಮಾದ ಪ್ರಮುಖ ಘಟ್ಟ. ಜೀವನ, ಪ್ರೀತಿ ಮತ್ತು ಪಯಣದ ಬಗ್ಗೆ ಇದು ನನಗೆ ಹೆಚ್ಚು ಹತ್ತಿರವಾದ ತಾತ್ವಿಕ ಚಿತ್ರ. ಆದ ರೀತಿಯಲ್ಲಿ ನಿರೂಪಿಸಲು ಪ್ರಯತ್ನಿಸಿದ್ದೇನೆ” ಎನ್ನುತ್ತಾರೆ ರವಿಚಂದ್ರನ್. “ಈ ಪಾತ್ರಕ್ಕೆ 61 ವರ್ಷವಿದ್ದರು ನಾನಿನ್ನೂ ಸಣ್ಣವನಾಗಿ ಕಾಣಿಸುತ್ತೇನೆ” ಎಂದು ಚಟಾಕಿ ಹಾರಿಸುತ್ತಾರೆ.
ಇದು ಕೇಲವಲ ನಾಯಕ ನಾಯಕಿಯ ಚಿತ್ರ ಅಲ್ಲ ಎನ್ನುವ ನಟ ರವಿಚಂದ್ರನ್ “ಕೆಲವು ಸಮಯಕ್ಕೆ ಸುದೀಪ್ ಮತ್ತು ರವಿಶಂಕರ್ ಪಾತ್ರಗಳಾಗಿ ಬರುತ್ತಾರೆ ಮುಂದೆ ಅವರ ಕಂಠ ಉಳಿದುಕೊಳ್ಳುತ್ತದೆ. ಪ್ರಕಾಶ್ ರಾಜ್, ತಾರ, ರಂಗಾಯಣ ರಘು. ಸಾಧು ಕೋಕಿಲಾ ಅವರ ಕಂಠ ಮೂಡಿಬರುತ್ತದೆ. ಪವಿತ್ರ ಲೋಕೇಶ್ ಮತ್ತು ವಿಜಯ್ ರಾಘವೇಂದ್ರ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದಾರೆ” ಎಂದು ವಿವರಿಸುತ್ತಾರೆ.
ಇದು ಹೊಸ ಪ್ರಾಕಾರದ ಸಿನೆಮಾ ಎನ್ನುವ ರವಿಚಂದ್ರನ್ “ನಾನು ಮಾಡಿರುವ ಈ ಸಿನೆಮಾ ದೊಡ್ಡ ರಿಸ್ಕ್ ಎಂದವರಿದ್ದಾರೆ. ಆದರೆ ನನಗೆ ರಿಸ್ಕ್ ತೆಗೆದುಕೊಳ್ಳುವುದಿಷ್ಟ. ಇದು ಕಮರ್ಷಿಯಲ್ ಮಾದರಿ ಸಿನೆಮಾ ಕೂಡ ಅಲ್ಲ. ಆದುದರಿಂದ ಡ್ಯುಯೆಟ್ ಹಾಡು ಅಥವಾ ಹಾಸ್ಯ ನಿರೀಕ್ಷಿಸಬೇಡಿ” ಎನ್ನುತ್ತಾರೆ ರವಿಚಂದ್ರನ್. “ಮೊದಲಿಗೆ ಕಮರ್ಷಿಯಲ್ ಸಿನೆಮಾ ಮಾಡಬೇಕೆಂದೇ ಇದನ್ನು ಬರೆದದ್ದು ಆದರೆ ಗಂಭೀರವಾದದ್ದನ್ನು ಮಾಡಬೇಕೆಂದು ಬದಲಾಯಿಸಿದೆ. ಒಂದು ಹಾಡು ಬಿಟ್ಟರೆ ಇನ್ನುಳಿದವೆಲ್ಲ ಸಂದರ್ಭೋಚಿತ” ಎಂದು ವಿವರಿಸುತ್ತಾರೆ. ಅಪೂರ್ವ ರವಿಚಂದ್ರನ್ ಎದುರಿಗೆ ‘ಅಪೂರ್ವ’ದಲ್ಲಿ ನಟಿಸಿದ್ದಾರೆ.
Comments are closed.