ಕರ್ನಾಟಕ

ಪುಟ್ಟ ಬಾಲಕಿಯ ಮೇಲೆ ಎರಗಿದ ಹತ್ತಾರು ಬೀದಿ ನಾಯಿಗಳ ಹಿಂಡು !

Pinterest LinkedIn Tumblr

dogs

ಬೆಂಗಳೂರು: 6 ವರ್ಷ ವಯಸ್ಸಿನ ಪುಟ್ಟ ಬಾಲಕಿಯ ಮೇಲೆ ಏಕಾಏಕಿ ಎರಗಿದ ಹತ್ತಾರು ಬೀದಿ ನಾಯಿಗಳ ಹಿಂಡು, ಬಾಲಕಿಯನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿರುವ ಘಟನೆ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ನಡೆದಿದೆ.

ಆ ಅಮಾಯಕ ಪುಟ್ಟ ಬಾಲಕಿ ಮಳೆ ಬಂದ ಖುಷಿಯಲ್ಲಿ ಸ್ನೇಹಿತೆಯೊಂದಿಗೆ ಮನೆ ಮುಂದೆ ನಿಂತಿದ್ದ ನೀರಿನಲ್ಲಿ ಆಟವಾಡಿ ಮನೆಗೆ ಬಂದು ಅಲ್ಲೇ ಮರೆತು ಬಂದಿದ್ದ ಚಪ್ಪಲಿ ತರಲು ಹೋದಾಗ ಹತ್ತು ಬೀದಿ ನಾಯಿಗಳು ಆಕೆಯ ಮೇಲೆ ಎರಗಿ ಮನಬಂದಂತೆ ಕಚ್ಚಿ ಗಾಯಗೊಳಿಸಿದೆ. ಪದೇ ಪದೇ ಬೀದಿ ನಾಯಿಗಳ ಹಾವಳಿ ನಡೆಯುತ್ತಿದ್ದರೂ ಬಿಬಿಎಂಪಿ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ನಿನ್ನೆ ಮಧ್ಯಾಹ್ನ ಮಾಗಡಿ ರಸ್ತೆಯಲ್ಲಿನ ಉಲ್ಲಾಳು ರಸ್ತೆಯಲ್ಲಿರುವ ಅಂಜನಾನಗರದ ಬಿಳೇಕಲ್ ಗ್ರಾಮದ ರಾಮು-ಜಯಲಕ್ಷ್ಮಿ ಅವರ ಪುತ್ರಿ ಆರು ವರ್ಷದ ರಮ್ಯಾಳಿಗೆ ಬೀದಿ ನಾಯಿಗಳು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.

ರಮ್ಯಾ ನೆರೆಯ ಮನೆಯ ಬಾಲಕಿಯೊಂದಿಗೆ ಮನೆ ಮುಂದೆ ಗುಂಡಿಯಲ್ಲಿ ನಿಂತಿದ್ದ ನೀರಿನಲ್ಲಿ ಆಟವಾಡಿ ಮನೆಗೆ ವಾಪಸ್ಸಾಗಿದ್ದಾಳೆ. ನಂತರ ಆಟವಾಡುತ್ತಿದ್ದ ಜಾಗದಲ್ಲೇ ಚಪ್ಪಲಿ ಬಿಟ್ಟು ಬಂದಿರುವುದು ನೆನಪಾಗಿ ಅದನ್ನು ತರಲು ಬಂದ ಕೂಡಲೇ ಅದೆಲ್ಲಿದ್ದವೋ ಹತ್ತು ನಾಯಿಗಳು ಒಮ್ಮೆಗೆ ರಮ್ಯಾ ಮೇಲೆ ಎರಗಿವೆ. ಸ್ಥಳೀಯರೊಬ್ಬರು ಮೃತಪಟ್ಟಿದ್ದರಿಂದ ರಮ್ಯಾ ಪೋಷಕರು ಸೇರಿದಂತೆ ಆ ಬೀದಿಯಲ್ಲಿದ್ದವರೆಲ್ಲಾ ಸಾವಿನ ಮನೆಗೆ ತೆರಳಿದ್ದರು. ನಾಯಿಗಳು ದಾಳಿ ಮಾಡಿದಾಗ ರಮ್ಯಾ ಭಯ ಹಾಗೂ ನೋವಿನಿಂದ ಚೀರಾಡುತ್ತಿದ್ದುದು ಯಾರಿಗೂ ಕೇಳಿಸಲೇ ಇಲ್ಲ. ರಮ್ಯಾಳ ತೊಡೆ, ಕೈ-ಕಾಲು, ಮುಖಕ್ಕೆ ತೀವ್ರತರದ ಗಾಯಗಳಾಗಿವೆ.

ಗಾಯದ ನೋವು, ನಾಯಿಗಳ ಭೀಭತ್ಸ ಮುಖಗಳ ಭೀತಿಯಿಂದ ಮನೆಗೆ ಬಂದು ನರಳುತ್ತಾ ಮಲಗಿದ್ದ ರಮ್ಯಾಳನ್ನು ನಂತರ ಬಂದ ಪೋಷಕರು ನೋಡಿ ಹೌಹಾರಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ದರೂ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ನಂತರ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಯಿಗಳ ದಾಳಿ ಬಗ್ಗೆ ಬಿಬಿಎಂಪಿಗೆ ತಿಳಿಸಿದರೂ ಯಾರೂ ಬಂದು ವಿಚಾರಿಸಿಲ್ಲವೆಂದು ರಮ್ಯಾ ತಂದೆ-ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಈ ಸಂಜೆಗೆ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಸ್ಥಾಯಿ ಸಮಿತಿ ನಿಷ್ಕ್ರಿಯ: ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಪಕ್ಷೇತರ ಅಭ್ಯರ್ಥಿ ಮುಜಾಹೀದ್ ಪಾಷಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಇವರು ಅಧ್ಯಕ್ಷರಾದ ಮೇಲೆ ಆರೋಗ್ಯ ಸ್ಥಾಯಿ ಸಮಿತಿ ನಿಷ್ಕ್ರಿಯವಾಗಿಬಿಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಇವರು ಯಾವುದೇ ಆಸ್ಪತ್ರೆಗೆ ಭೇಟಿ ನೀಡಿಲ್ಲ, ಪಾಲಿಕೆ ವ್ಯಾಪ್ತಿ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ಔಷಧಿ ಇದೆಯೋ ಇಲ್ಲವೋ ಎಂಬುದನ್ನು ವಿಚಾರಿಸಿಕೊಂಡೇ ಇಲ್ಲ.

ಇತ್ತ ಲೆಫರಲ್ ಆಸ್ಪತ್ರೆಗಳಲ್ಲಿ ನಾಯಿ ಕಡಿತಕ್ಕೆ ಔಷಧಿ ಇದೆಯೆಂದು ಬಿಬಿಎಂಪಿ ಅಧಿಕಾರಿಗಳು ಬುರುಡೆ ಬಿಡುತ್ತಾರೆ. ಆದರೆ ಯಾವ ಆಸ್ಪತ್ರೆಯಲ್ಲೂ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇದಕ್ಕೆ ರಮ್ಯಾ ಸಾಕ್ಷಿ. ನಾಯಿ ಕಡಿತದ ಹಲವಾರು ಪ್ರಕರಣಗಳು ವರದಿಯಾಗುತ್ತಲೇ ಇದ್ದರೂ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಪಾಲಿಕೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತಲೂ ಇಲ್ಲ. ಇನ್ನಾದರೂ ಸಾವು-ನೋವು ಸಂಭವಿಸುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments are closed.