ಕರ್ನಾಟಕ

ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddu111

ಮೈಸೂರು: 5 ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಜಯಲಲಿತ ಹಾಗೂ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಜನ ಮನ್ನಣೆ ನೀಡಿದ್ದಾರೆ. ಕೇರಳದಲ್ಲಿ ಕಳೆದ ಬಾರಿ ಯುಡಿಎಫ್ ಅಧಿಕಾರದಲ್ಲಿತ್ತು. ಈ ಬಾರಿ ಎ ಎಲ್ ಡಿಎಫ್ ಅಧಿಕಾರಕ್ಕೆ ಬಂದಿದೆ. ಇನ್ನು ಅಸ್ಸಾಂ ನಲ್ಲಿ ಕಳೆದ 15 ವರ್ಷಗಳಿಂದ ಕಾಂಗ್ರೇಸ್ ಆಡಳಿತ ನಡೆಸಿತ್ತು. ಜನ ಬದಲಾವಣೆ ಬಯಸಿ ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಅವಕಾಶ ನೀಡಿದ್ದಾರೆ. ಇದರಲ್ಲಿ ವಿಶೇಷತೆ ಏನು ಇಲ್ಲ ಎಂದರು.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು ದೇಶದ ಯಾವ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬುದನ್ನು ನೀವೇ ಹೇಳಿ ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೇಸ್ ಮುಕ್ತವನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೇಯೇ 2018 ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇದನ್ನು ತಡೆಯಲು ಸಾಧ್ಯವಿಲ್ಲ. ರಾಜಕೀಯ ಟೀಕೆಗಾಗಿ ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಪದೇ ಪದೇ ಈ ವಿಷಯ ಹೇಳುತ್ತಲೇ ಇರುತ್ತಾರೆ. ಅವರಿಗೆ ನಾಲಿಗೆಯ ಮೇಲೆ ಹಿಡಿತವಿಲ್ಲ. ಈ ಬಾರಿಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೇಸ್ ಅಭ್ಯರ್ಥಿ ರವೀಂದ್ರ ಗೆಲುವು ಸಾಧಿಸಲಿದ್ದಾರೆ ಎಂದರು.

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಧ್ಯದಲ್ಲೇ ದೆಹಲಿಗೆ ತೆರಳಿ ವರಿಷ್ಟರೊಂದಿಗೆ ಚರ್ಚೆ ನಡೆಸಲಿದ್ದೇನೆ. ಈ ಹಿಂದೆ ದೆಹಲಿಯಲ್ಲಿ ರಾಜ್ಯದ ಬಿಜೆಪಿ ಸಂಸದರೊಂದಿಗೆ ಬರ ಪರಿಹಾರ ಹಣ ಉಪಯೋಗಿಸಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಅಂದು ಯಾವ ಸಂಸದರು ತಕರಾರು ಮಾಡಲಿಲ್ಲ. ಈಗ ವಿನಾಕಾರಣ ಟೀಕಿಸುವ ಉದ್ದೇಶದಿಂದಲೇ ಬಿಜೆಪಿ ನಾಯಕರು ಬರ ಪರಿಹಾರ ಹಣದ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

Comments are closed.