
ಹೊಳಲ್ಕೆರೆ: ಅಪಘಾತಕ್ಕೆ ಸಿಲುಕಿ ಕೇಳದಂತಾದ ಕಿವಿಗಳು. ಕಿವುಡುತನದಿಂದ ಶಿಕ್ಷಕರು ಬೋಧಿಸುವ ಪಾಠ ಆಲಿಸಲಾರದ ಸ್ಥಿತಿ. ಶಿಕ್ಷಕರು ಪಾಠ ಮಾಡುವಾಗ ಅವರ ಮುಖವನ್ನಷ್ಟೇ ನೋಡಬೇಕು. ಬೋರ್ಡ್ ಮೇಲೆ ಬರೆದದ್ದನ್ನು ನೋಡಿ ಯಾವ ಪಾಠ ಎಂದು ಅರ್ಥ ಮಾಡಿಕೊಳ್ಳಬೇಕು. ಗೆಳೆಯರ ಮಾತೂ ಕೇಳುವುದಿಲ್ಲ. ಹುಡುಗನನ್ನು ಅರ್ಥ ಮಾಡಿಕೊಳ್ಳದವರು ಕಿವುಡ ಹುಡುಗ ಹೇಗೆ ಎಸ್ಸೆಸ್ಸೆಲ್ಸಿ ಪಾಸಾಗಬಲ್ಲ ಎಂದುಕೊಳ್ಳುತ್ತಿದ್ದರು. ಆದರೆ ಇವನಿಗೆ ಬಂದ ಅಂಕಗಳು ಬರೋಬ್ಬರಿ 590 (ಶೇ.94.40) !
ತಾಲ್ಲೂಕಿನ ಚಿತ್ರಹಳ್ಳಿ ಗೇಟ್‍ನಲ್ಲಿರುವ ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಚಿತ್ರಹಳ್ಳಿ ಗ್ರಾಮದ ಜಿ.ಎನ್.ರಘು ಎಂಬ ವಿದ್ಯಾರ್ಥಿ ಈ ಅಸಾಧಾರಣ ಸಾಧನೆ ಮಾಡಿರವ ಬಾಲಕ. ಕನ್ನಡದಲ್ಲಿ 123, ಇಂಗ್ಲಿಷ್‍ನಲ್ಲಿ 81, ಹಿಂದಿಯಲ್ಲಿ 97,ಗಣ ತದಲ್ಲಿ 91, ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದಿರುವ ಈ ವಿದ್ಯಾರ್ಥಿ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ ! ಈ ಮೂಲಕ ಶಾಲೆಗೆ ಟಾಪರ್ ಆಗಿದ್ದಾನೆ.
ಪ್ರತಿಭಾವಂತ ವಿದ್ಯಾರ್ಥಿ: ವಿದ್ಯಾರ್ಥಿ ಜಿ.ಎನ್.ರಘು 10 ವರ್ಷದವನಾಗಿದ್ದಾಗ ಟ್ರ್ಯಾಕ್ಟರ್ ಅಡಿಗೆ ಸಿಲುಕಿದ್ದ. ಆಗ ಕಿವಿಗೆ ಬಲವಾದ ಹೊಡೆತ ಬಿದ್ದು, ಕೇಳುವ ಸಾಮಥ್ರ್ಯವನ್ನೇ ಕಳೆದುಕೊಂಡಿದ್ದ. ನನಗೆ ಶಿಕ್ಷಕರು ಮಾಡುವ ಪಾಠ ಕೇಳುತ್ತಿರಲಿಲ್ಲ. ಶಿಕ್ಷಕರು ಪಾಠ ಮಾಡುವಾಗ ಅವರ ತುಟಿಯ ಚಲನೆಯನ್ನು ಗಮನಿಸುತ್ತ ಅರ್ಥ ಮಾಡಿಕೊಳ್ಳುತ್ತಿದ್ದೆ.
ಬೋರ್ಡ್ ಮೇಲೆ ಬರೆದ ಅಂಶಗಳನ್ನು ಗ್ರಹಿಸುತ್ತಿದ್ದೆ. ಅರ್ಥವಾಗದಿದ್ದರೆ ಗೆಳೆಯರನ್ನು ಕೇಳುತ್ತಿದ್ದೆ. ಅವರು ಪಾಠದ ಅಂಶಗಳನ್ನು ಬರೆದು ತೋರಿಸುತ್ತಿದ್ದರು. ಶಿಕ್ಷಕರ ಬಿಡುವಿನ ಅವಧಿಯಲ್ಲಿ ಅವರಿಂದ ಸಲಹೆ ಪಡೆಯುತ್ತಿದ್ದೆ. ಅನುಮಾನಗಳ ಬಂದರೆ ತಕ್ಷಣ ಬಗೆಹರಿಸಿಕೊಳ್ಳುತ್ತಿದ್ದೆ ಎನ್ನುತ್ತಾನೆ ಈ ವಿದ್ಯಾರ್ಥಿ.
Comments are closed.