ಕರ್ನಾಟಕ

‘ಜಿಲ್ ಜಿಲ್’ ಚಿತ್ರದ ನಟಿಗೆ ನಿರ್ಮಾಪಕರಿಂದ ಲೈಂಗಿಕ ಕಿರುಕುಳ?

Pinterest LinkedIn Tumblr

puvisha_manoharan

ಸ್ಯಾಂಡಲ್ ವುಡ್ ನಲ್ಲಿ ನಟಿಯರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ ಜಿಲ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಚೆನ್ನೈ ಮೂಲದ ನಟಿ ಪೂವಿಶಾ ಮನೋಹರನ್ ಅವರಿಗೆ ಚಿತ್ರದ ನಿರ್ಮಾಪಕರು ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಳಿಬಂದಿದೆ.

ಈ ಹಿಂದೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಕಸಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೂವಿಶಾ ಮನೋಹರನ್ ಅವರು ಈಗ ಹೊಸಬರು ಮಾಡುತ್ತಿರುವ ‘ಜಿಲ್ ಜಿಲ್’ ಎಂಬ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಚಿತ್ರದ ನಿರ್ಮಾಪಕ ವೆಂಕಟೇಶ್ ಬೆಳಗುಳಿ ಹಾಗೂ ಕ್ಯಾಮರಾ ಮೆನ್ ರವಿಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶೂಟಿಂಗ್ ಇದೆ ಎಂದು ಚೆನ್ನೈನಿಂದ ಲಾಡ್ಜ್ ಒಂದಕ್ಕೆ ಕರೆಸಿಕೊಂಡ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಅವರು ಕ್ಯಾಮೆರಾ ಮೆನ್ ಜೊತೆ ಸೇರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೂವಿಶಾ ಮನೋಹರನ್ ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಚಿತ್ರದ ನಿರ್ಮಾಪಕ ಮತ್ತು ಕ್ಯಾಮೆರಾ ಮೆನ್ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

‘ಶೂಟಿಂಗ್ ಸೆಟ್ ನಲ್ಲಿ ಕೂಡ ಕ್ಯಾಮೆರಾ ಮೆನ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಮೈ ಮುಟ್ಟಿ ತೀಟೆ ತೀರಿಸಿಕೊಳ್ಳುತ್ತಿದ್ದರು. ಇದನ್ನು ನಿರ್ಮಾಪಕರ ಬಳಿ ಹಂಚಿಕೊಂಡಾಗ ಸಿನಿಮಾ ಅಂದ ಮೇಲೆ ಇದೆಲ್ಲಾ ಸಾಮಾನ್ಯ ಎಂದಿದ್ದರು’ ಎಂದು ಪೂವಿಶಾ ತಿಳಿಸಿದ್ದಾರೆ.

ಕಳೆದ ವರ್ಷ ಸೆಟ್ಟೇರಿದ್ದ ಈ ಸಿನಿಮಾ ಈಗಾಗಲೇ ಕೊನೆಯ ಹಂತದಲ್ಲಿತ್ತು, ತ್ರಿಭಾಷಾ ನಟಿಯಾಗಿರುವ ಪೂವಿಶಾ ಮನೋಹರನ್ ಅವರು ‘ಜಿಲ್ ಜಿಲ್’ ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು.

‘ಜಿಲ್ ಜಿಲ್’ ಚಿತ್ರಕ್ಕೆ ನವ ನಿರ್ದೇಶಕ ಮಧು ಎಂಬುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಲ್ಲಾ ಹೊಸಬರೇ ಇರುವ ಈ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಬಿಡುಗಡೆಯಾಗಿದೆ.

Comments are closed.