
ಮೈಸೂರು: ಮನೆಯಲ್ಲಿ ಬಡತನ. ತಂದೆ ಅಂಗವಿಕಲ, ಖಾಸಗಿ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್. ಮನೆಯಲ್ಲಿದ್ದ ಕಷ್ಟವನ್ನು ನೋಡಲಾಗದೇ ‘ಐಎಎಸ್’ ಅಧಿಕಾರಿಯಾಗುವ ಆಸೆಯನ್ನು ಈಕೆ ಹೊಂದಿದ್ದರು. ಆದರೆ, ಡಿ.ಕೆ.ರವಿ ಸಾವಿನ ನಂತರ ಐಎಎಸ್ ಅಧಿಕಾರಿ ಆಗುವುದಿಲ್ಲ ಎನ್ನುತ್ತಾರೆ.
ಬಡತನದ ಹಿನ್ನೆಲೆಯಿಂದ ಬಂದಿರುವ ಎಸ್.ಯಶಸ್ವಿನಿ, ನಗರದ ಮರಿಮಲ್ಲಪ್ಪ ಶಾಲೆಯಲ್ಲಿ ಓದಿ, ಎಸ್ಸೆಸ್ಸೆಲ್ಸಿಯಲ್ಲಿ 621 (ಶೇ 99.36) ಅಂಕ ಗಳಿಸಿದ್ದಾರೆ. ಹೆಚ್ಚು ಅಂಕಗಳಿಸಬೇಕು ಎನ್ನುವುದೇ ಈಕೆಯ ಕನಸಾಗಿತ್ತು. ಪ್ರತಿನಿತ್ಯ 6ರಿಂದ 8 ಗಂಟೆ ಅಧ್ಯಯನ. 600ಕ್ಕಿಂತ ಹೆಚ್ಚು ಅಂಕ ಗಳಿಸಬೇಕು ಎನ್ನುವುದು ಇವರ ಗುರಿ. ಈಗ 621 ಅಂಕ ಗಳಿಸಿದ್ದು, ಮುಖದಲ್ಲಿ ನಗು ಮೂಡಿದೆ.
ಗದ್ಗದಿತರಾದ ತಾಯಿ, ಮಗಳು: ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕಬ್ಬಳ್ಳಿಯವರಾದ ಇವರು ಪ್ರತಿನಿತ್ಯ ಕೂಲಿಮಾಡಿಯೇ ಬದುಕಬೇಕಿತ್ತು. ಆದರೆ, ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ಸೇರಿದರು. ತಂದೆ ಸಿದ್ದಲಿಂಗದೇವರು ಹುಟ್ಟಿನಿಂದಲೇ ಅಂಗವಿಕಲ. ಒಂದು ಕಾಲು ಸ್ವಾಧೀನವಿಲ್ಲ. ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ. ತಾಯಿ ಶಶಿಕಲಾ ಅವರು ಡಿಟಿಪಿ ಆಪರೇಟರ್. 6ನೇ ತರಗತಿ ಓದುತ್ತಿರುವ ಸಂಜಯ್ ಎಂಬ ಮಗನೂ ಇದ್ದಾನೆ.
ಮಕ್ಕಳನ್ನು ಓದಿಸಲು ಸಾಲ ಹೆಚ್ಚಾಗಿತ್ತು. ಇವನ್ನೆಲ್ಲಾ ನೋಡುತ್ತಿದ್ದ ಯಶಸ್ವಿನಿ, ‘ನಾನು ಹೆಚ್ಚು ಅಂಕ ಗಳಿಸೇ ತೀರುತ್ತೇನೆ’ ಎಂದು ಪೋಷಕರ ಕೈ ಹಿಡಿದು ಪ್ರಮಾಣ ಮಾಡಿದ್ದಳಂತೆ. ‘ಈಗ ಸಾಧಿಸಿ ತೋರಿಸಿದ್ದಾಳೆ ನೋಡಿ’ ಎಂದು ಹೇಳುವಾಗ ತಾಯಿ ಶಶಿಕಲಾ ಗದ್ಗದಿತರಾದರು. ಅಮ್ಮನ ಕಣ್ಣೀರನ್ನು ಕಂಡ ಯಶಸ್ವಿನಿ ಸಹಾ ಕಣ್ಣೀರಾದರು.
ಐಎಎಸ್ ಅಧಿಕಾರಿ ಆಗುವುದಿಲ್ಲ: ‘ಬಡವರ ಮಕ್ಕಳಿಗೆ ಕಷ್ಟ ಹೆಚ್ಚು. ಓದುವ ಆಸೆಯಿದ್ದರೂ ಪ್ರತಿಭೆಯಿದ್ದರೂ ಅವಕಾಶ ಕಡಿಮೆ. ಇದಕ್ಕೆ ನಾನೇ ಉದಾಹರಣೆ. ಚಿಕ್ಕ ಹುಡುಗಿಯಾಗಿದ್ದ ಕಾಲದಿಂದಲೂ ನೊಂದಿದ್ದೆ. ಬಡವರ ಮಕ್ಕಳಿಗೆ ಆಸರೆಯಾಗಬೇಕು, ಅವರನ್ನು ಓದಿಸಬೇಕು. ಈ ಕಾರಣಕ್ಕಾಗಿಯಾದರೂ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಕಂಡಿದ್ದೆ. ಆದರೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವು ನನ್ನನ್ನು ತೀವ್ರ ಕಾಡಿತು. ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ ಎಂದು ಗಾಢವಾಗಿ ಅನ್ನಿಸಿತು. ಹಾಗಾಗಿ, ವಿಜ್ಞಾನದ ಕ್ಷೇತ್ರಕ್ಕೆ ಕಾಲಿಡುತ್ತೇನೆ. ವಿಜ್ಞಾನಿ ಅಥವಾ ಎಂಜಿನಿಯರ್ ಆಗಿ, ಸಮಾಜಕ್ಕೆ ಒಳಿತು ಮಾಡುತ್ತೇನೆ’ ಎಂದು ಯಶಸ್ವಿನಿ ‘ಪ್ರಜಾವಾಣಿ’ ಜತೆಗೆ ಭಾವನೆ ಹಂಚಿಕೊಂಡರು.
‘ಮನೆಪಾಠಕ್ಕೆ ಹೋಗಿಲ್ಲ. ಶುಲ್ಕ ಭರಿಸುವ ಸಾಮರ್ಥ್ಯವೂ ಇರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಮಾತ್ರ ಸ್ನೇಹಿತರ ಮನೆಗೆ ಪಾಠ ಕಲಿಯಲು ಹೋಗುತ್ತಿದ್ದೆ. ಡಿಟಿಪಿ ಆಪರೇಟರ್ ಆಗಿದ್ದ ಅಮ್ಮ, ಪರೀಕ್ಷೆಗೆ ಒಂದು ತಿಂಗಳು ಇರುವಾಗ ರಜೆ ಹಾಕಿ ಓದಿಸಿದರು. ಅಪ್ಪ ಸಂಜೆಯ ಮೇಲೆ ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಓದಿಗೆ ತೊಂದರೆ ಆಗದಿರಲಿ ಎಂದು. ಆದರೆ, ಹಣ್ಣು, ಹಾಲು ತಂದು ಕೊಡುತ್ತಿದ್ದರು’ ಎಂದು ಯಶಸ್ವಿನಿ ಭಾವುಕರಾದರು.
ನೇಸರ ಕಾಡನಕುಪ್ಪೆ