ಕರ್ನಾಟಕ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಕ್ಕೆ ಉತ್ತಮ ಮಳೆಯಾಗುವ ನಿರೀಕ್ಷೆ

Pinterest LinkedIn Tumblr

rain

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ನೇರ ಪರಿಣಾಮ ರಾಜ್ಯದ ಮೇಲಿಲ್ಲ. ಆದರೆ ಇದರ ಪರೋಕ್ಷ ಪರಿಣಾಮದಿಂದಾಗಿ ಮೇ 20ರವರೆಗೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗು, ಮಿಂಚು, ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಬಾಂಗ್ಲಾದೇಶದತ್ತ ಮುನ್ನುಗ್ಗುತ್ತಿದ್ದು, ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ಮುಂಗಾರುಪೂರ್ವ ಮಳೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಬೀಳುತ್ತಿದೆ. ಇದೇ ರೀತಿ ಇನ್ನೂ ಒಂದು ವಾರ ಕಾಲ ಮುಂದುವರೆಯಲಿದೆ. ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಧಿಕ ಪ್ರಮಾಣದ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಹೇಳಿದರು.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೇ 17 ಮತ್ತು 18 ರಂದು ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡು ಬಂದಿವೆ. ಹೀಗೆ ವಾಯುಭಾರ ಕುಸಿತ ಉಂಟಾಗುವುದು ಸಹಜ ಪ್ರಕ್ರಿಯೆ. ಇದರಿಂದ ನೈರುತ್ಯ ಮುಂಗಾರು ಮಳೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಈ ಬಾರಿಯ ಮುಂಗಾರು ಮಳೆ 2-3 ದಿನಗಳಿಗಿಂತ ಮುಂಚೆಯೇ ಪ್ರಾರಂಭವಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಮಾಸಾಂತ್ಯಕ್ಕೆ ಮುಂಗಾರು ಮಳೆ ಪ್ರಾರಂಭವಾಗುವ ಎಲ್ಲಾ ಮುನ್ಸೂಚನೆಗಳೂ ಕಂಡು ಬರುತ್ತಿವೆ ಎಂದು ಅವರು ಹೇಳಿದರು.

ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದ ಗಾಳಿ ಸಹಿತ ಮಳೆಯಾಗುತ್ತಿದೆ. ಇದು ತಮಿಳುನಾಡಿನ ಭೂ ಪ್ರದೇಶ ತಲುಪುವ ಬದಲು ಬಾಂಗ್ಲಾ ದೇಶದ ಕಡೆಗೆ ಮುನ್ನುಗ್ಗುತ್ತಿರುವುದರಿಂದ ಹೆಚ್ಚಿನ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ ಎಂದು ಶ್ರೀನಿವಾಸರೆಡ್ಡಿ ಸ್ಪಷ್ಟಪಡಿಸಿದರು.

Write A Comment