ಕರ್ನಾಟಕ

ಸಂಚಾರ ದಟ್ಟಣೆ ತಗ್ಗಿಸಲು ಶೀಘ್ರವೇ ಸಬರ್ಬನ್ ರೈಲು

Pinterest LinkedIn Tumblr

cm

ಬೆಂಗಳೂರು: ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅತಿ ಶೀಘ್ರದಲ್ಲೇ ಸಬರ್ಬನ್ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಇಲ್ಲಿ ಹೇಳಿದ್ದಾರೆ.

ಮುಂಗಡ ಪತ್ರದಲ್ಲಿ ಘೋಷಿಸಿದ ಸಬರ್ಬನ್ ರೈಲ್ವೆ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು, ಆದಷ್ಟು ಶೀಘ್ರ ಸಬರ್ಬನ್ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡು ಮುಗಿಸುವ ಜತೆಗೆ ಬೆಂಗಳೂರಿನ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.

ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂಬ ಮರುನಾಮಕರಣ ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ಕರ್ನಾಟಕ ಸರ್ಕಾರಕ್ಕೆ 7 ಸಾವಿರಕ್ಕೂ ಹೆಚ್ಚು ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜಂಟಿ ಸಹಭಾಗಿತ್ವದ ಕಂಪನಿ
ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನಡುವೆ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಅವುಗಳನ್ನು ಅನುಷ್ಠಾನ ಮಾಡಲು ಮುಂದಿನ 3 ತಿಂಗಳ ಒಳಗಾಗಿ ಜಂಟಿ ಸಹಭಾಗಿತ್ವದ ಕಂಪನಿಯನ್ನು ಆರಂಭಿಸಲಾಗುವುದು.

ರೈಲ್ವೆ ಯೋಜನೆಗಳಿಗೆ ರಾಜ್ಯ ಉತ್ತಮವಾಗಿ ಸಹಕಾರ ನೀಡುತ್ತಿವೆ. ಮುಂದಿನ ದಿನಗಳಲ್ಲ ಇನ್ನಷ್ಟು ಸಹಕಾರ ನೀಡಿದರೆ ಮತ್ತಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

5 ವರ್ಷಗಳಲ್ಲಿ 8 ಲಕ್ಷ 50 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರದ ಯೋಜನೆಗಳಲ್ಲಿ ರಾಜ್ಯ ಸರ್ಕಾರ ಕೈಜೋಡಿಸಿದರೆ ಮತ್ತಷ್ಟು ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದರು.

ಬೆಂಗಳೂರು – ಮೈಸೂರು ಜೋಡಿ ಮಾರ್ಗವನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಅದೇ ರೀತಿ ಬೆಂಗಳೂರು – ಹಾಸನ ಜೋಡಿ ಮಾರ್ಗವನ್ನು ಈ ವರ್ಷಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನವನ್ನು ಬಳಸಿ ಮುಂದಿನ 3 ವರ್ಷಗಳಲ್ಲಿ ಯಲಬಂಕ – ಪೆನುಕೊಂಡ, ಅರಸಿಕೆರೆ – ತುಮಕೂರು, ಹುಬ್ಬಳ್ಳಿ – ಚಿಕ್ಕಜಾಜೂರು ಜೋಡಿ ಮಾರ್ಗವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು ನಗರ ರೈಲ್ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರಿಡುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಸಂಗೊಳ್ಳಿ ರಾಯಣ್ಣ ದೇಶ ಕಂಡ ಅಪ್ರತಿಮ ದೇಶಭಕ್ತ ಎಂದು ಗುಣಗಾನ ಮಾಡಿದರು.

ಬೆಂಗಳೂರು ನಗರದ ಸಂಚಾರಿ ದಟ್ಟಣೆ ಕಡಿಮೆ ಮಾಡಲು ಸಬರ್‌ಬನ್ ರೈಲ್ವೆ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಕೇಂದ್ರದ ರೈಲ್ವೆ ಯೋಜನೆಗಳಿಗೆ ಉಚಿತವಾಗಿ ಭೂಮಿ ಹಾಗೂ ಯೋಜನಾ ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ನೀಡಲಾಗುತ್ತಿದೆ. ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದ ಬಳಿ ಹಣಕಾಸಿನ ತೊಂದರೆಯಿಲ್ಲ. ರಾಜ್ಯಕ್ಕೆ ಮತ್ತಷ್ಟು ರೈಲ್ವೆ ಯೋಜನೆಗಳನ್ನು ಮಂಜೂರು ಮಾಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಸದಾನಂದಗೌಡ, ಜಿ.ಎಂ. ಸಿದ್ದೇಶ್ವರ್, ಸಚಿವರಾದ ರೋಷನ್ ಬೇಗ್, ಕೆ.ಜೆ. ಜಾರ್ಜ್, ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಶಾಸಕರೂ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment