ಕರ್ನಾಟಕ

ಮೂರು ಕಥೆಗಳು ಒಂದೊಂದಾಗಿ ತೆರೆದುಕೊಳ್ಳುವ ‘1986’ ಹಾರರ್ ಚಿತ್ರ !

Pinterest LinkedIn Tumblr

21

‘ಮೂರು ಕಥೆಗಳು ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತವೆ. ಕೊನೆಯಲ್ಲಿ ಆ ಕಥೆಗಳೆಲ್ಲ ಬಂದು ಒಂದಾಗುತ್ತವೆ. ಅಂದರೆ, ಕ್ಲೈಮ್ಯಾಕ್ಸ್ನಲ್ಲಿ ಲಿಂಕ್ ಆಗುತ್ತವೆ. ಅದೇನು? ಯಾಕೆ? ಎಂಬಿತ್ಯಾದಿ ಕುತೂಹಲಕ್ಕೆ ಸಿನಿಮಾ ನೋಡಿ…’

-ಹೀಗೊಂದು ರಹಸ್ಯ ಮಾತಿನ ಮೂಲಕವೇ ಕಥೆ ಕೌತುಕ ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿದರು ನಿರ್ದೇಶಕ ಶಶಿಧರ್ ಎಂ. ಇವರಿಗಿದು ಚೊಚ್ಚಲ ಆಕ್ಷನ್-ಕಟ್. ಹಾಗಂತ, ಸಿನಿಮಾ ಹೊಸತಲ್ಲ. ಕನ್ನಡವಲ್ಲದೆ ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ವಿಎಫ್ಎಕ್ಸ್ ಕೆಲಸ ಮಾಡಿದ ಅನುಭವ ಬೆನ್ನಿಗಿದೆ. ಬಾಡಿಗೆ ಪಡೆದ ಮನೆ ಮಾಲೀಕರನ್ನೇ ನಿರ್ವಪಕರನ್ನಾಗಿಸಿ, ಸಿನಿಮಾ ಮಾಡುತ್ತಿರುವ ಹೆಚ್ಚುಗಾರಿಕೆ ಶಶಿ ಅವರದು. ಅಂದ್ಹಾಗೆ, ಆ ಚಿತ್ರದ ಹೆಸರು; 1986.

ಏನಿದು 1986? ಕಥೆ ಮೂವತ್ತು ವರ್ಷಗಳ ಹಿಂದೆ ನಡೆಯುತ್ತೆ. 2016ಕ್ಕೆ 30 ವರ್ಷಗಳು ಹಿಂದೆಯೆಂದರೆ, 1986ರಲ್ಲಿ. ಮೂರು ಬೇರೆ ಬೇರೆ ಕಥೆಗಳು ಒಂದೇ ಕ್ಲೈಮ್ಯಾಕ್ಸ್ ನಲ್ಲಿ ಸಂಧಿಸುವುದು ಇಲ್ಲಿನ ವಿಶೇಷ. ಇದನ್ನು ಸಸ್ಪೆನ್ಸ್- ಥ್ರಿಲ್ಲರ್ ಆಗಿ ತೋರಿಸಲಿದ್ದೇನೆ ಎಂದು ವಿವರ ಕೊಟ್ಟರು ಶಶಿಧರ್. ಮೂಲತಃ ಹೋಟೆಲ್ ಉದ್ಯಮಿಯಾಗಿರುವ ವಿ. ಮಹೇಶ್ ಈ ‘1986’ ಚಿತ್ರಕ್ಕೆ ನಿರ್ವಪಕರು. ‘ಒಂದೆರಡು ಮೂರು ಬಾರಿ ‘ಕಥೆ ಮಾಡಿಕೊಂಡಿದ್ದೇನೆ, ಕೇಳಿ’ ಅಂತೆಲ್ಲ ಶಶಿ ಹೇಳಿದಾಗೆಲ್ಲ ತಪ್ಪಿಸಿಕೊಂಡಿದ್ದೆ. ಕೊನೆಗೊಂದು ದಿನ, ನಾನೇ ಆವರ ಕಚೇರಿಗೆ ಹೋಗಿ ಕಥೆ ಕೇಳಿದೆ. ಕೇಳ ಕೇಳುತ್ತಿದ್ದಂತೆಯೇ, ಮನಸೋತುಬಿಟ್ಟೆ’ ಎಂದು ಹೇಳಿಕೊಂಡರು ಮಹೇಶ್.

ಟಿ.ಎಸ್. ನಾಗಭರಣ ‘1986’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿರುವುದು ವಿಶೇಷ. ಮಂಡ್ಯ ರಮೇಶ್, ಶೋಭರಾಜ್ ಕೂಡ ನಟಿಸುತ್ತಿದ್ದಾರೆ. ಇವರನ್ನು ಬಿಟ್ಟರೆ, ಪ್ರಧಾನ ಪಾತ್ರಗಳಲ್ಲಿ ಹೊಸಬರೇ ಇದ್ದಾರೆ. ಪ್ರಸನ್ನ ಮುದ್ದಣ್ಣ, ರೋಶನಿ, ಅರ್ಜುನ್ ಹೀಗೆ. ಭರಣರಿಗೆ ಜಮಿನ್ದಾರನ ಪಾತ್ರವಾದರೆ, ಪ್ರಸನ್ನ ಪತ್ರಕರ್ತ; ರೋಶನಿ ಮೂಗಿ. ಅರ್ಜುನ್ಗೆ ಅಟೋ ಚಾಲಕನ ರೋಲ್. ಅಂದಮೇಲೆ, ಕಥೆ ಏನು ಎಂಬುದು ನಿಮ್ಮ ಅವಗಾಹನೆಗೆ. ನಿರ್ವಪಕ, ನಿರ್ದೇಶಕ, ನಾಯಕ- ನಾಯಕಿ, ಇನ್ನೊಂದಷ್ಟು ಜನ ಮೈಸೂರಿನವರೇ ಆಗಿರುವುದರಿಂದ ಕಥೆಯಲ್ಲೂ ಮೈಸೂರಿನ ಸೊಗಡಿರುತ್ತೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

Write A Comment