ಕರ್ನಾಟಕ

ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿನೀಡುತ್ತಿರುವ ಪ್ರವಾಸಿಗರಿಗೆ ಸಂಖ್ಯೆಯಲ್ಲಿ ಏರಿಕೆ

Pinterest LinkedIn Tumblr

myಮೈಸೂರು, ಮೇ 13-ಸಾಂಸ್ಕೃತಿಕ ನಗರಿ ಖ್ಯಾತಿಯ ಮೈಸೂರು ಪ್ರವಾಸಿಗರಿಗೂ ಸ್ವರ್ಗ. ಇದಕ್ಕೆ ಇಂಬು ನೀಡುವಂತೆ ಈ ಬಾರಿ ಅತಿ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿ ಇಲ್ಲಿನ ಪ್ರಸಿದ್ಧ ಅಂಬಾವಿಲಾಸ , ಜಗನ್ಮೋಹನ ಅರಮನೆಗಳ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಕಳೆದ ವರ್ಷ ಬೇಸಿಗೆಯಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಅತಿ ಹೆಚ್ಚು ಮಂದಿ ಮೈಸೂರಿಗೆ ಭೇಟಿ ನೀಡಿದ್ದಾರೆ.

ಅದರಲ್ಲೂ ಕೇರಳ ಹಾಗೂ ತಮಿಳುನಾಡಿನ ಹೆಚ್ಚು ಜನ ಪ್ರವಾಸಕ್ಕಾಗಿ ಇಲ್ಲಿ ಬಂದಿದ್ದು, ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ 3ನೆ ಸ್ಥಾನದಲ್ಲಿದೆ ಎಂದು ಮೈಸೂರು ಅರಮನೆ ಮಂಡಳಿಯ ಸುಬ್ರಹ್ಮಣ್ಯ ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.65 ಲಕ್ಷ ಮಂದಿ ಅರಮನೆ ಸೇರಿದಂತೆ ಮೈಸೂರಿನ ಇತರೆಡೆಗಳಿಗೆ ಭೇಟಿ ನೀಡಿದ್ದರೆ, ಈ ಬಾರಿ 2.35 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಮೈಸೂರು ಅರಮನೆ ಮತ್ತಷ್ಟು ಪ್ರಖ್ಯಾತವಾಗಿದ್ದು, ಮೂಲಭೂತ ಸೌಕರ್ಯಗಳು ಹೆಚ್ಚಿರುವುದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅರಮನೆಗೆ ಬರುವವರಿಗಾಗಿ ಪಾರ್ಕಿಂಗ್ ವ್ಯವಸ್ಥೆ, ಟಿಕೆಟ್ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕೈಗೊಂಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ.

ನಗರದ ಇನ್ನಿತರ ಪ್ರವಾಸಿ ಕೇಂದ್ರಗಳಾದ ಸೆಂಟ್ ಫಿಲೋಮಿನಾ ಚರ್ಚ್, ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ವಿಷಾದಕರ: ಪ್ರವಾಸಿಗರ ಸಂಖ್ಯೆ ಏನೋ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ನಗರದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಿಂದ ಪ್ರವಾಸಿಗರಾದಿಯಾಗಿ ಸ್ಥಳೀಯರು ಸಹ ಹಳ್ಳ-ಕೊಳ್ಳಗಳನ್ನು ದಾಟಿ ಹಲವೆಡೆ ಪರ್ಯಾಯ ರಸ್ತೆ ಹುಡುಕುತ್ತಾ, ನಿಗದಿತ ಸ್ಥಳಕ್ಕೆ ತಲುಪಲು ಹರಸಾಹಸ ಪಡುವಂತಾಗಿದೆ.

ಕೆಲವೆಡೆ ಫಲಕಗಳಿದ್ದರೂ ಅದೆಷ್ಟೋ ಕಡೆ ಮಾರ್ಗ ಸೂಚಿಸುವ ಫಲಕಗಳೇ ಇಲ್ಲ. ಹಾಗಾಗಿ ಜನ ಯಾವ ಕಡೆ ಸಾಗುವುದು ಎಂದು ತಬ್ಬಿಬ್ಬಾಗುತ್ತಾರೆ. ಈ ರಸ್ತೆಯಲ್ಲೂ ಹೋಗಬಹುದೇನೋ ಎಂದು ರಸ್ತೆಗೆ ನುಗ್ಗಿದರೆ ಆ ರಸ್ತೆ ನಿಷೇಧಿಸಲಾಗಿರುತ್ತದೆ. ಹಾಗಾಗಿ ದಂಡ ಕಟ್ಟಬೇಕಾದ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ದಿನನಿತ್ಯ ಪೊಲೀಸರೊಂದಿಗೆ ಜಗಳಕ್ಕಿಳಿಯುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಒಟ್ಟಾರೆ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆ ತಪ್ಪಿಸಲು ಸೂಕ್ತ ಕ್ರಮಕೈಗೊಂಡರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮೈಸೂರು, ಮತ್ತಷ್ಟು ಮಂದಿಯನ್ನು ಆಕರ್ಷಿಸುವುದರಲ್ಲಿ ಹಿಂದೆ ಬೀಳದು.

Write A Comment