ಬೆಂಗಳೂರು, ಮೇ 13-ಜೂನ್ 11ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರತಿಪಕ್ಷ ಬಿಜೆಪಿಯಲ್ಲಿ ಹಲವಾರು ಹೆಸರುಗಳು ಮುಂಚೂಣಿಯಲ್ಲಿವೆ. ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯ ನಾಯ್ಡು ಹಾಗೂ ಅಯನೂರು ಮಂಜುನಾಥ್ ಅಧಿಕಾರಾವಧಿ ಜೂನ್ 30ರಂದು ಅಂತ್ಯಗೊಳ್ಳಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತಿದೆ. ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಈ ಬಾರಿ ಓರ್ವ ಅಭ್ಯರ್ಥಿಯನ್ನು ಮಾತ್ರ ಬಿಜೆಪಿ ರಾಜ್ಯಸಭೆಗೆ ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿದೆ. 46 ಶಾಸಕರನ್ನು ಹೊಂದಿರುವ ಕಮಲಪಡೆ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಬೇಕು.
ಒಂದೇ ಸ್ಥಾನಕ್ಕೆ ಪಕ್ಷದ ವಲಯದಲ್ಲಿ ಆಕಾಂಕ್ಷಿಗಳು ಹಲವರಿದ್ದರೂ ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಹಾಲಿ ಸದಸ್ಯ ಅಯನೂರು ಮಂಜುನಾಥ್, ಉದ್ಯಮಿ ವಿಜಯ್ ಸಂಕೇಶ್ವರ್ ಹೆಸರು ಕೇಳಿಬಂದಿದೆ. ಆದರೆ ವೆಂಕಯ್ಯ ನಾಯ್ಡು ಅವರನ್ನೇ ಮರು ಆಯ್ಕೆ ಮಾಡಬೇಕಾದ ಅನಿವಾರ್ಯತೆಯೂ ಪಕ್ಷಕ್ಕೆ ಎದುರಾಗಿದೆ.
ನಾಯ್ಡು ಸಾಧ್ಯತೆ ಹೆಚ್ಚು :
ಈ ಬಾರಿ ಬಿಜೆಪಿ ವತಿಯಿಂದ ಸಚಿವ ವೆಂಕಯ್ಯ ನಾಯ್ಡು ಮರು ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರದಲ್ಲಿ ನಗರಾಭಿವೃದ್ದಿ ಸಚಿವರಾದ ಮೇಲೆ ಅವರು ರಾಜ್ಯಕ್ಕೆ ವಿಶೇಷವಾಗಿ ಬೆಂಗಳೂರಿಗೆ ಒಂದಿಷ್ಟು ಕೊಡುಗೆಗಳನ್ನು ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಮೆಟ್ರೊ ರೈಲು 2ನೇ ಹಂತದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿರುವುದು, ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಮೈಸೂರು, ದಾವಣಗೆರೆ ನಗರಗಳನ್ನು ಆಯ್ಕೆ ಮಾಡಿದ್ದು , ನರ್ಮ್ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಒದಗಿಸಿರುವುದು ಸೇರಿದಂತೆ ಕೆಲವು ಯೋಜನೆಗಳನ್ನು ಜಾರಿ ಮಾಡುವಲ್ಲಿ ಅವರ ಪಾತ್ರವನ್ನು ಅಲ್ಲಗಳಿಯುವಂತಿಲ್ಲ. ಆದರೆ ಇದೇ ನಾಯ್ಡು ರಾಜ್ಯದ ನೆಲ-ಜಲ, ಭಾಷೆ, ಗಡಿ ಸೇರಿದಂತೆ ಕೆಲವು ವಿಷಯಗಳಲ್ಲಿ ಮಹಾಮೌನಿ ಎಂಬ ಅಪವಾದವೂ ಇದೆ. ಹೀಗಾಗಿ ಅವರನ್ನು ಬಿಜೆಪಿ ಆಡಳಿತವಿರುವ ರಾಜಸ್ಥಾನದಿಂದ ಆಯ್ಕೆ ಮಾಡುವ ಚಿಂತನೆಯೂ ಕೇಂದ್ರದಲ್ಲಿ ನಡೆದಿದೆ.
ಒಂದು ವೇಳೆ ವೆಂಕಯ್ಯ ನಾಯ್ಡು ರಾಜಸ್ಥಾನದಿಂದ ಆಯ್ಕೆಯಾದರೆ 2ನೇ ಬಾರಿಗೆ ಅಯನೂರು ಮಂಜುನಾಥ್ಗೆ ಅದೃಷ್ಟ ಖುಲಾಯಿಸಲಿದೆ. ಆದರೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಸಾಕಷ್ಟು ಹಿಡಿತ ಸಾಧಿಸಿರುವುದರಿಂದ ಅವರ ಕೃಪೆ ಯಾರ ಮೇಲೆ ಎಂಬುದು ಇನ್ನೂ ನಿಗೂಢವಾಗಿದೆ. ಪಕ್ಷದ ಕೊಂಡಿ: ಕರ್ನಾಟಕದಲ್ಲಿ ಬಿಜೆಪಿ ಎಷ್ಟೇ ಸರಿದಾರಿಯಲ್ಲಿ ನಡೆಯುತ್ತದೆ ಎಂದರೂ ಇಲ್ಲಿ ಹಲವು ಪಂಗಡಗಳು, ಗುಂಪುಗಳಾಗಿವೆ. ಇರುವುದು ಗುಟ್ಟಾಗಿ ಉಳಿದಿಲ್ಲ. ಯಡಿಯೂರಪ್ಪ ಬಣ, ಅನಂತ್ ಬಣ, ಜಗದೀಶ್ ಶೆಟ್ಟರ್ ಬಣ, ಆರ್ಎಸ್ಎಸ್ ಬಣ ಎಂದು ಪಕ್ಷದಲ್ಲಿ ನೂರೆಂಟು ಬಣಗಳಾಗಿವೆ.
ವೆಂಕಯ್ಯ ನಾಯ್ಡು ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾದರೆ ಪಕ್ಷದಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತಾರೆಂಬ ಆಶಾಭಾವನೆ ವರಿಷ್ಠರಲ್ಲಿದೆ. ಯಡಿಯೂರಪ್ಪ ಸೇರಿದಂತೆ ಆರ್ಎಸ್ಎಸ್ ನಾಯಕರ ಜೊತೆ ಒಡನಾಡಿಯಾಗಿರುವ ನಾಯ್ಡು ಒಬ್ಬ ಅಜಾತಶತ್ರುವೂ ಹೌದು. ರಾಜ್ಯದಿಂದ ಅವರು ಆಯ್ಕೆಯಾದರೆ ಪಕ್ಷದ ಮೇಲೆ ಹಿಡಿತ, ಕಾಲಕಾಲಕ್ಕೆ ಎಲ್ಲರನ್ನೂ ಒಗ್ಗೂಡಿಸಿ ಪಕ್ಷದ ಸಂಘಟನೆಗೂ ಸಲಹೆಸೂಚನೆಗಳನ್ನು ನೀಡುತ್ತಾರೆಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ನಾಯ್ಡು ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚಳವಾಗಿದೆ.