ಬಾಗಲಕೋಟೆ: ಜೀವನೋಪಾಯಕ್ಕಾಗಿ ಕೂಲಿ ಹುಡುಕಿಕೊಂಡು ಗುಳೇ ಹೋಗದಿರಲಿ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 8 ವರ್ಷಗಳ ಹಿಂದೆ ಜಾರಿಗೆ ತಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಈಗ ಹಣ ಮಾಡುವ ದಂಧೆಯಾಗಿ ಅನೇಕ ಹಗರಣಗಳ ಕೂಪವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಬಾಗಲಕೋಟೆ ಜಿಲ್ಲೆಯ
ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಪಂ ಪಿಡಿಒ ಒಬ್ಬರ ಕೈ ಚಳಕದಿಂದ ಮಾದಾಪುರದಲ್ಲಿ ಏಳು ವರ್ಷದ ಹಿಂದೆ ಮೃತಪಟ್ಟವರು, 1ರಿಂದ 3ನೇ ತರಗತಿ ವಿದ್ಯಾರ್ಥಿಗಳು, ಎದ್ದು ನಿಲ್ಲಲೂ ಆಗದ ಅಂಗವಿಕಲರೂ ಉದ್ಯೋಗ ಖಾತ್ರಿ ಕೆಲಸ ಮಾಡಿ ಕೂಲಿ ಪಡೆದಿದ್ದಾರೆ!.
ಮಾದಾಪುರದಲ್ಲಿ ಗಟಾರ ನಿರ್ಮಾಣ ಕಾಮಗಾರಿ 18.7.2013ರಿಂದ 24.7.2013ರ ವರೆಗೆ ನಡೆದಿದೆ. ಒಟ್ಟು 238 ಮಾನವ ದಿನಗಳು ಸೃಷ್ಟಿಸಿದ್ದು, ಇದಕ್ಕೆ 41,411 ರೂ. ಕೂಲಿ ಪಾವತಿ ಮಾಡಲಾಗಿದೆ. ಈ ಕೂಲಿಕಾರರ ಪಟ್ಟಿಯಲ್ಲಿ
ಸತ್ತ ವ್ಯಕ್ತಿ, ಪೊಲೀಸ್ ಪೇದೆ, ಸರ್ಕಾರಿ ನೌಕರರು ಹಾಗೂ 8ರಿಂದ 12 ವರ್ಷದೊಳಗಿನ ಶಾಲಾ ಮಕ್ಕಳ ಹೆಸರೂ ಇವೆ.
ಅದೇ ಕಾಮಗಾರಿ ಹೆಸರಿನಲ್ಲಿ 15.12.2013ರಿಂದ 21.12.2013ರ ವರೆಗೆ 350 ಮಾನವ ದಿನಗಳ ಸೃಜನೆಗೆ 60,900 ರೂ. ಹಾಗೂ 20.5.2014ರಿಂದ 27.5.2014ರ ವರೆಗೆ 160 ಮಾನವ ದಿನಗಳಿಗೆ 30,560 ರೂ. ಕೂಲಿ ಪಾವತಿ ಮಾಡಲಾಗಿದೆ.
ಸತ್ತವನಿಗೂ ಖಾತ್ರಿ ಕೂಲಿ: ಗೋವಾಕ್ಕೆ ಕೆಲಸ ಹುಡುಕಿಕೊಂಡು ಹೋಗಿದ್ದ ಮಾದಾಪುರದ ಶಿವಪ್ಪ ಗೋವಿಂದಪ್ಪ ವಾಲಿಕಾರ ಅಲ್ಲೇ 2009ರಲ್ಲಿಯೇ ನಿಧನರಾಗಿದ್ದಾರೆ. ಆದರೂ ಅವರ ಹೆಸರಿನಲ್ಲಿ ಜಾಬ್ ಕಾರ್ಡ್(ನಂ. ಕೆಎನ್-01-004-019-005/4221) ಸೃಷ್ಟಿಸಲಾಗಿದೆ.
ಮೃತ ಶಿವಪ್ಪ ವಾಲಿಕಾರ ಮತ್ತು ಅವರ ಪುತ್ರ ರಾಜು ವಾಲಿಕಾರ (ಸರ್ಕಾರಿ ನೌಕರ)ಇಬ್ಬರ ಹೆಸರಿನಲ್ಲಿ ಒಂದೇ ಸಂಖ್ಯೆಯ ಜಾಬ್‌ಕಾರ್ಡ್ ಸೃಷ್ಟಿಸಲಾಗಿದೆ. ನಿಯಮದಂತೆ ಕೂಲಿಕಾರರ ವೈಯಕ್ತಿಕ ಖಾತೆಗೆ ಕೂಲಿ ಹಣ ಹಾಕಬೇಕು.
ಆದರೆ ಇಲ್ಲಿ ರಾಜು ವಾಲಿಕಾರರ ಬ್ಯಾಂಕ್ ಖಾತೆ ನಂ. 17123063092 (ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಚಿತ್ತರಗಿ ಶಾಖೆ) ಗೆ ದಿ| ಶಿವಪ್ಪ ವಾಲಿಕಾರ, ರಾಜು ವಾಲಿಕಾರ, ಕವಿತಾ ವಾಲಿಕಾರ, ರೇಖಾ ವಾಲಿಕಾರ, ಭಾರತಿ
ವಾಲಿಕಾರ, ಮಾರುತಿ ವಾಲಿಕಾರ, ಯಲ್ಲಪ್ಪ ವಾಲಿಕಾರ, ಯಂಕಪ್ಪ ವಾಲಿಕಾರ, ಗೀತಾ ವಾಲಿಕಾರ ಅವರ ಕೂಲಿ ಹಣವನ್ನೂ ಜಮಾ ಮಾಡಲಾಗಿದೆ.
ಇಷ್ಟೇ ಅಲ್ಲ. ಅಂಗನವಾಡಿ ಮಕ್ಕಳಿಂದ 70 ವರ್ಷದ ವೃದಟಛಿರವರೆತಗೂ ಜಾಬ್‌ಕಾರ್ಡ್ ತಯಾರಿಸಿ ಉದ್ಯೋಗ ಖಾತ್ರಿಯಡಿ ಕೂಲಿ ಪಾವತಿಸಲಾಗಿದೆ. 2011ರಲ್ಲಿ ಸತ್ತವರ ಹೆಸರಿನಲ್ಲಿ ಬಿಲ್ ತೆಗೆದು ಖ್ಯಾತಿಗೆ ಬಂದಿದ್ದ ಇದೇ
ಹಿರೇಮಾಗಿ ಗ್ರಾಪಂನಲ್ಲಿ ಇದೀಗ ಮತ್ತೆ ಹಗರಣ ನಡೆಸಲಾಗಿದೆ.
ಪಿಡಿಒ ವರ್ಗ: ಸತ್ತವರ ಹೆಸರಿನಲ್ಲಿ ಚರಂಡಿ ಕಾಮಗಾರಿ ಹೆಸರಿಗೆ ಬಿಲ್ ತೆಗೆದಾಗ ಸಂಗಯ್ಯ ಹಿರೇಮಠ ಎಂಬುವವರು ಹಿರೇಮಾಗಿ ಗ್ರಾಪಂನಲ್ಲಿ ಪಿಡಿಒ ಆಗಿದ್ದರು. ನಂತರ ಎಸ್. ಎಸ್.ಕಾಳಗಿ ಪಿಡಿಒ ಆಗಿದ್ದರು. ಅವರೂ ಕೂಡ ಎರಡು ದಿನಗಳ ಹಿಂದೆ ಬೇರೆಡೆ ವರ್ಗ ಮಾಡಲಾಗಿದೆ.
-ಉದಯವಾಣಿ