ಕರ್ನಾಟಕ

ಯುಪಿಎಸ್‍ಸಿ ಪರೀಕ್ಷೆ ಕನ್ನಡದಲ್ಲೇ ಬರೆದು ಪಾಸಾದ ಕೋಲಾರದ ಭೈರಪ್ಪ ! ಇವರ ಕನಸು ಮಾತ್ರ ದೊಡ್ಡದು…

Pinterest LinkedIn Tumblr

baira

ಬೆಂಗಳೂರು: ಗ್ರಾಮೀಣ ಭಾಗದ ಮಕ್ಕಳು ಕಷ್ಟಪಟ್ಟು ಓದಿದರೆ ಯುಪಿಎಸ್‍ಸಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು ತೇರ್ಗಡೆಯಾಗಬಹುದು ಎಂಬುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ ಕೋಲಾರದ ಮಾಲೂರು ತಾಲೂಕಿನ ಭೈರಪ್ಪ.

ಪಡುವನಹಳ್ಳಿ ಭೈರಪ್ಪ ಈ ಬಾರಿಯ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ತೆಗೆದುಕೊಂಡು ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ 1037 ಶ್ರೇಯಾಂಕ ಪಡೆಯುವ ಮೂಲಕ ಕರುನಾಡಿಗೆ ಕೀರ್ತಿ ತಂದಿದ್ದಾರೆ.

ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಯಾಕೆ ಬರೆದಿದ್ದೀರಿ ಎಂದು ಕೇಳಿದ್ದಕ್ಕೆ, ನಾನು ಮೂಲತಃ ಕನ್ನಡ ಮಾಧ್ಯಮದಲ್ಲಿ ಓದಿ ಬೆಳೆದವನು. ಇಂದು ಇಂಗ್ಲೀಷ್ ಎಲ್ಲದ್ದಕ್ಕೂ ಮುಖ್ಯ ಎಂದು ಕರೆಯುವ ಕಾಲದಲ್ಲಿ ಕನ್ನಡದಲ್ಲಿ ಬರೆದು ಐಎಎಸ್ ಪಾಸ್ ಮಾಡಬೇಕೆಂಬ ನಿರ್ಧಾರ ಮಾಡಿದ್ದೆ. ಹೀಗಾಗಿ ಕನ್ನಡ ಭಾಷೆಯನ್ನೇ ತೆಗೆದುಕೊಂಡು ಈಗ ಈ ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ ಎಂದು ಹೇಳುತ್ತಾರೆ.

ಭೈರಪ್ಪನವರು ಪಿಯು ಓದುವಾಗ ವೈದರಾಗಬೇಕು ಎನ್ನುವ ಕನಸು ಕಂಡಿದ್ದರು. ಆದರೆ ವೈದ್ಯ ಪದವಿ ಓದಲು ಸಿಇಟಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಗೊತ್ತೇ ಇರಲಿಲ್ಲವಂತೆ. ಬಳಿಕ ಕೋಲಾರದ ಕಾಲೇಜಿನಲ್ಲಿ ಬಿಎಸ್‍ಸಿ ಪದವಿಯನ್ನು ಪಡೆದು ದೂರ ಶಿಕ್ಷಣದಿಂದ ರಸಾಯನಶಾಸ್ತ್ರದಿಂದ ಸ್ನಾತಕೋತ್ತರ ಪದವಿಯನ್ನು ಓದಿದರು.

ಪದವಿ ಓದುವಾಗಲೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗಲು ಜಿಲ್ಲಾಧಿಕಾರಿಯಾಗಬೇಕೆಂಬ ಕನಸು ಕಂಡ ಇವರು ಇದುವರೆಗೂ 5 ಬಾರಿ ಯುಪಿಎಸ್‍ಸಿ ಪರೀಕ್ಷೆಯನ್ನು ಬರೆದಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಕೆಎಎಸ್ ಪರೀಕ್ಷೆಯಲ್ಲೂ ಇವರು ಉತ್ತೀರ್ಣರಾಗಿದ್ದು, ಸಂದರ್ಶನಕ್ಕೂ ಆಯ್ಕೆ ಆಗಿದ್ದಾರೆ. ಒಂದು ವೇಳೆ ಸಂದರ್ಶನದಲ್ಲಿ ಆಯ್ಕೆ ಆಗಿ ಎಸಿ ಹುದ್ದೆ ಸಿಕ್ಕಿದರೆ ಮುಂದಿನ ವರ್ಷ ಮತ್ತೊಮ್ಮೆ ಯುಪಿಎಸ್‍ಸಿ ಪರೀಕ್ಷೆ ಬರೆದು ಐಎಎಸ್ ಆಗುತ್ತೇನೆ ಎಂದು ಹೇಳುತ್ತಾರೆ ಭೈರಪ್ಪ.

ಯಾವ ರೀತಿ ಓದಿದ್ದೀರಿ ಎಂದು ಕೇಳಿದ್ದಕ್ಕೆ ಈ ಬಾರಿ ಹೆಚ್ಚಿನ ಸಮಯವನ್ನು ನಾನು ಕೆಎಎಸ್ ಪರೀಕ್ಷೆಗೆ ಮೀಸಲಿಟ್ಟಿದ್ದೆ, ಯುಪಿಎಸ್‍ಸಿ ಪರೀಕ್ಷೆಗೆ ಒಂದು ತಿಂಗಳು ಮಾತ್ರ ಓದಿದ್ದೆ. 2011ರಲ್ಲೂ ನಾನು ಕನ್ನಡದಲ್ಲೇ ಬರೆದು ಕೆಎಎಸ್ ತೇರ್ಗಡೆಯಾಗಿ ತಹಾಶೀಲ್ದಾರ್ ಆಗಿ ನೇಮಕಗೊಂಡಿದ್ದೆ. ಆದರೆ ಈ ಪರೀಕ್ಷೆಯ ಫಲಿತಾಂಶ ಇನ್ನೂ ಕೋರ್ಟ್‍ನಲ್ಲಿರುವ ಕಾರಣ ಮತ್ತೊಮ್ಮೆ ಈ ಪರೀಕ್ಷೆಗಳನ್ನು ಬರೆದಿದ್ದೇನೆ ಎನ್ನುತ್ತಾರೆ.

ಬಡತನದಿಂದ ಬಂದ ಭೈರಪ್ಪನವರು ಹುಟ್ಟಿದ ಮೂರು ತಿಂಗಳಿನಲ್ಲೇ ತಂದೆಯನ್ನು ಕಳೆದುಕೊಂಡರೂ ತಾಯಿ ಮತ್ತು ಅಣ್ಣನ ನಿರಂತರ ಪ್ರೋತ್ಸಾಹದಿಂದ ಯುಪಿಎಸ್‍ಸಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿರುವ ಅವರು ಐಎಎಸ್, ಕೆಎಎಸ್ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಿಕೊಂಡೇ ಈ ಎರಡೂ ಪರೀಕ್ಷೆ ಪಾಸಾಗಿದ್ದಾರೆ.

ಒಂದೊಮ್ಮೆ ಐಎಎಸ್ ಆಗಿ ನೇಮಕಗೊಂಡಲ್ಲಿ ಪ್ರತಿದಿನ ಬೆಳಗ್ಗೆ ಬಡ ವಿದ್ಯಾರ್ಥಿಗಳಿಗೆ ಕನ್ನಡಲ್ಲಿ ವಿಜ್ಞಾನದ ಪಾಠದ ಜೊತೆಗೆ ಐಎಎಸ್ ತರಬೇತಿ ನೀಡುತ್ತೇನೆ ಎಂದು ಕನಸು ಕಾಣುತ್ತಿರುವ ಭೈರಪ್ಪನವರ ಈ ಕನಸು ನನಸಾಗಲಿ.

Write A Comment