ಕರ್ನಾಟಕ

ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಆಚರಣೆ: ಜಾತಿಯ ಎಲ್ಲೆ ಮೀರಿದ ಮದುವೆ

Pinterest LinkedIn Tumblr

09sdg1ಸಿಂದಗಿ: ಲಿಂಗಾಯತ ಪಂಚಮಸಾಲಿ ಹುಡುಗ ಹಾಗೂ ಪರಿಶಿಷ್ಟ ಜಾತಿ (ಮಾದಿಗ) ಹುಡುಗಿಯ ಜೊತೆ ಅಂತರ್ಜಾತಿ ವಿವಾಹ ಏರ್ಪಡಿಸುವ ಮೂಲಕ ಪಟ್ಟಣದಲ್ಲಿ ಸೋಮವಾರ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಜೈಭೀಮ ದಳ ದಲಿತ ಸಂಘಟನೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸಿಂದಗಿಯ ಗುಂಡಪ್ಪ ಹೊನಗುಂಡ ಅವರ ಪುತ್ರ ಬಸಣ್ಣ ಹಾಗೂ ಶಂಕ್ರೆಪ್ಪ ಮಡ್ನಳ್ಳಿಯವರ ಪುತ್ರಿ ಅನಿತಾ ಇವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಬಂತೇಜಿ ಸಾರಿಪುತ್ರ (ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ) ಅವರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಿ ಬೌದ್ಧ ಧರ್ಮದ ಪದ್ಧತಿಯಂತೆ ಪಂಚಶೀಲ ತತ್ವ ಸ್ವೀಕಾರ ಮಾಡುವ ಮೂಲಕ ಪತಿ–ಪತ್ನಿಯರಾಗಿ ಒಂದಾದರು.

ಐದು ಜನ ಬಂತೇಜಿ ಕುಮಾರರು ವಿವಾಹ ಮಂತ್ರ ಪಠಿಸಿದರು. ಬಸಣ್ಣ ಅವರು ಅನಿತಾಗೆ ಮಾಂಗಲ್ಯಧಾರಣೆ ಮಾಡಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ನಂತರ ಪುಷ್ಪವೃಷ್ಟಿ ಮೂಲಕ ಸಭಿಕರು ಅವರಿಬ್ಬರಿಗೆ ಶುಭ ಕೋರಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಂದಾಯ ಇಲಾಖೆ ಅಧಿಕಾರಿ ಸುರೇಶ ಮ್ಯಾಗೇರಿ, ವಕೀಲ ಎಸ್.ಬಿ. ಖಾನಾಪೂರ, ದಲಿತ ಸಂಘಟನೆ ಸಂಚಾಲಕ ಚಂದ್ರಕಾಂತ ಸಿಂಗೆ, ತಾಲ್ಲೂಕು ಪಂಚಾಯ್ತಿ ಸದಸ್ಯ ಎಂ.ಎನ್. ಕಿರಣರಾಜ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹಚ್ಚಿದ ಕ್ರಾಂತಿಯ ಕಿಡಿ ಇನ್ನೂ ಪ್ರಜ್ವಲಿಸುತ್ತಿದೆ ಎನ್ನುವುದಕ್ಕೆ ಪ್ರಸ್ತುತ ಅಂತರ್ಜಾತಿ ವಿವಾಹವೇ ಜೀವಂತ ಸಾಕ್ಷಿ ಎಂದರು.

ಬಂತೇಜಿ ಸಾರಿಪುತ್ರ ರಾಜಶೇಖರ ಕೂಚಬಾಳ ಸಮಾಜದಲ್ಲಿ ಸಮಾನತೆ, ಸಾಮರಸ್ಯ ತರುವ ಇಂಥ ಅಂತರ್ಜಾತಿ ವಿವಾಹಗಳು ಇನ್ನೂ, ಇನ್ನೂ ಹೆಚ್ಚಬೇಕು ಎಂದು ಆಶಯ ವ್ಯಕ್ತಪಡಿಸಿದರು.

Write A Comment