ಕರ್ನಾಟಕ

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದೇ ತರಲಾಗುವುದು: ಟಿ.ಬಿ.ಜಯಚಂದ್ರ

Pinterest LinkedIn Tumblr

tbತುಮಕೂರು, ಮೇ 9-ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಅದೇ ರೀತಿ ನಮ್ಮ ರಾಜ್ಯದಲ್ಲೂ ಜಾರಿಗೆ ತಂದೇ ತರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದ್ದಾರೆ. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಮೌಢ್ಯ ನಿಷೇಧ ಕುರಿತು ಕರಡು ರಚಿಸಲಾಗಿದ್ದು, ಅತಿ ಶೀಘ್ರದಲ್ಲೇ ಕರಡನ್ನು ಸಚಿವ ಸಂಪುಟದ ಗಮನಕ್ಕೆ ತಂದು ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದರು.

ಈ ಹಿಂದೆ ಈ ಕಾಯ್ದೆಯನ್ನು ವಿರೋಧಿಸಿದ್ದವರು ಇಂದು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಮಾಧ್ಯಮಗಳಲ್ಲಿ ವಿರೋಧಿಸಿದವರೇ ಕಾಯ್ದೆ ಜಾರಿಯ ಪರವಾಗಿದ್ದಾರೆ. ಇದರಲ್ಲಿ ಕೆಲ ಮಠಾಧೀಶರು ಮತ್ತು ಬುದ್ಧಿಜೀವಿಗಳ ಪರ-ವಿರೋಧವಾಗಿಯೂ ಇದ್ದಾರೆ. ಮೌಢ್ಯಾಚರಣೆಯಿಂದಾಗುವ ಅನಾಹುತಗಳ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡಲಾಗುವುದು ಎಂದರು. ಈ ಹಿಂದೆಯೇ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದೆ. ಆದರೆ ಕೆಲ ಮಠಾಧೀಶರು, ಬುದ್ಧಿ ಜೀವಿಗಳು ವಿಚಾರ ಅರಿಯದೆ ಇದರಿಂದಾಗುವ ಅನಾಹುತಗಳನ್ನು ಪರಿಶೀಲಿಸದೆ ನಿರಾಕರಿಸಿದ್ದರು. ಅವರಿಗೀಗ ಮನದಟ್ಟಾಗಿದ್ದು, ಶತಾಯಗತಾಯ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದರು.

ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮೈತ್ರಿ ಕುರಿತು ವರಿಷ್ಠರಿಂದ ಸಕಾರಾತ್ಮಕವಾಗಿ ಯಾವುದೇ ಮಾಹಿತಿ ಬಂದಿಲ್ಲ. ಸಂಜೆ ವೇಳೆಗೆ ಬರಬಹುದು. ಬಂದ ಕೂಡಲೇ ಮೈತ್ರಿ ವಿಚಾರ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ನಿರ್ಧಾರ ತಿಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್‌ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು. ಬಸವಣ್ಣನವರು 12ನೆ ಶತಮಾನದಲ್ಲಿ ಕ್ರಾಂತಿಯನ್ನುಂಟು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅಕ್ಕಮಹಾದೇವಿ ಅವರ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೋಹನ್‌ರಾಜ್, ಸಿಇಒ ಮಮತಾ, ಎಎಸ್‌ಪಿ ಮಂಜುನಾಥ್, ವೀರಶೈವ ಮುಖಂಡರಾದ ಗಂಗರಾಜು, ಪಿ.ಆರ್.ಸದಾಶಿವಯ್ಯ, ಚಂದ್ರಮೌಳಿ ಸೇರಿದಂತೆ ಮತ್ತಿತರರಿದ್ದರು.

Write A Comment