ಕರ್ನಾಟಕ

ಭರಣಿ ಮಳೆ ಬಂತು ರೈತರಲ್ಲಿ ಸಂತಸ ತಂತು

Pinterest LinkedIn Tumblr

rainಬೆಂಗಳೂರು, ಮೇ 9-ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಳೆದ ಮೂರು ದಿನಗಳಿಂದ ಅಲ್ಲಲ್ಲಿ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ. ಬರದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಭರಣಿ ಮಳೆ ಬಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ. ಇದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಅಷ್ಟೇ ಅಲ್ಲ, ರಾಜ್ಯದ ಗರಿಷ್ಠ ತಾಪಮಾನವೂ ಗಣನೀಯವಾಗಿ ಇಳಿಕೆಯಾಗಿದ್ದು, ಹೈದರಾಬಾದ್-ಕರ್ನಾಟಕ ಹೊರತು ಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳ ತಾಪಮಾನವೂ ಕೂಡ 40 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆಯಾಗಿದೆ.

ಭರಣಿ ಮಳೆ ಬಿದ್ದರೆ ಧರಣಿಯೆಲ್ಲಾ ಸಂತುಷ್ಟಿ ಎಂಬ ನಾಣ್ಣುಡಿಯಿದೆ. ಅದರಂತೆ ಈ ಬಾರಿ ಬರ ಹಾಗೂ ಬೇಸಿಗೆಯಿಂದ ತತ್ತರಿಸಿದ ರಾಜ್ಯದ ಹಲವೆಡೆ ಮಳೆಯಾಗಿದೆ. ಇದರಿಂದ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ರೈತ ಸಮುದಾಯದಲ್ಲಿದ್ದು, ಹೊಸ ಆಶಾಭಾವನೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮೋಡದಲ್ಲಿ ತೇವಾಂಶ ಹೆಚ್ಚಾಗಿದ್ದು, ಗಾಳಿಯಲ್ಲೂ ಕೂಡ ತೇವಾಂಶವಿರುವುದರಿಂದ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‌ರೆಡ್ಡಿ ಈ ಸಂಜೆಗೆ ತಿಳಿಸಿದರು.

ಕಳೆದ ಮೂರ್ನಾ ಲ್ಕು ದಿನಗಳಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಇದು ಮುಂಗಾರು ಪೂರ್ವ ಅಥವಾ ಬೇಸಿಗೆ ಮಳೆಯಾಗಿದ್ದು, ಇದಕ್ಕೆ ವಾಯುಭಾರ ಕುಸಿತ ಕಾರಣವಲ್ಲ. ಸಹಜ ಮಳೆಯಾಗಿದೆ ಎಂದು ಹೇಳಿದರು. ನಿನ್ನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನೇರಿಗಾ ಗ್ರಾಮ ಪಂಚಾಯ್ತಿಯಲ್ಲಿ ಅತ್ಯಧಿಕ 76.50 ಮಿ.ಮೀಟರ್‌ನಷ್ಟು ಮಳೆಯಾಗಿದೆ. ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾದ ವರದಿಯಾಗಿದೆ.

ರಾಮನಗರ, ಬೆಂಗಳೂರು ನಗರ, ಮೈಸೂರು ಜಿಲ್ಲೆಗಳಲ್ಲೂ ಕೂಡ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾದ ವರದಿಯಾಗಿದೆ. ಕೊಡಗು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕಲಬುರಗಿ, ಬೆಳಗಾವಿ, ಹಾಸನ, ಬೀದರ್, ಚಿಕ್ಕಬಳ್ಳಾಪುರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾದ ವರದಿಯಾಗಿದೆ. ಸತತ ಮಳೆಯಿಂದಾಗಿ ಗರಿಷ್ಠ ತಾಪಮಾನವೂ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿತ್ರದುರ್ಗ ದಾವಣಗೆರೆ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ 39 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗುತ್ತಿದೆ. 40 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿದ್ದು ತಾಪಮಾನ 35.80 ಡಿಗ್ರಿ ಸೆಲ್ಷಿಯಸ್‌ಗೆ ಇಳಿಕೆಯಾಗಿದೆ.

Write A Comment