ಕರ್ನಾಟಕ

ಐಸಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ Rank

Pinterest LinkedIn Tumblr

6BNP15ಬೆಂಗಳೂರು: ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು(ಐಸಿಎಸ್‌ಇ) 10ನೇ ತರಗತಿ ಮತ್ತು 12ನೇ ತರಗತಿ ಫ‌ಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, 10ನೇ ತರಗತಿ ಫ‌ಲಿತಾಂಶದಲ್ಲಿ ಬೆಂಗಳೂರಿನ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಆರ್‌.ಸುದರ್ಶನ್‌ 495 ಅಂಕ(ಶೇ.99) ಗಳಿಸುವ ಮೂಲಕ ಅಖೀಲ ಭಾರತ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎರಡನೇ ಟಾಪರ್‌ ಹಾಗೂ ರಾಜ್ಯದ ಮೊದಲ ಟಾಪರ್‌ ಎನಿಸಿದ್ದಾರೆ.

492 ಅಂಕ ಪಡೆಯುವ ಮೂಲಕ ನಗರದ ವಿವಿಧ ಶಾಲೆಗಳ ಐದು ವಿದ್ಯಾರ್ಥಿಗಳು ರಾಜ್ಯದ 2ನೇ ಟಾಪರ್‌ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಬಿಷಪ್‌ ಕಾಟನ್‌ ಗರ್ಲ್ಸ್‌ ಸ್ಕೂಲ್‌ನ ಈರಾ ಗುಪ್ತಾ, ಆರ್‌ಎನ್‌ಎಸ್‌ ವಿದ್ಯಾ ನಿಕೇತನ್‌ ಶಾಲೆಯ ಎಂ.ವಿ.ನವ್ಯಶ್ರೀ, ಸರ್ವೋದಯ ಶಾಲೆಯ ಘಾನವಿ ಉಮೇಶ್‌, ಪ್ರಸಿಡೆನ್ಸಿ ಶಾಲೆಯ ಪ್ರಖ್ಯಾತ್‌ ಉಳ್ಳಾಲ್‌, ಕುಮಾರನ್ಸ್‌ ಸ್ಕೂಲ್‌ನ ಅನಿರುದ್ಧ್ ಕೆ. ಮತ್ತು ನ್ಯೂ ಕೇಂಬ್ರಿಡ್ಜ್ಶಾಲೆಯ ನಿಶ್ಚಲ್‌ ಎ. ಪ್ರತಿಯೊಬ್ಬರೂ 492 ಅಂಕಗಳನ್ನು ಗಳಿಸಿದ್ದಾರೆ.

ಇನ್ನು 12ನೇ ತರಗತಿ ಫ‌ಲಿತಾಂಶದಲ್ಲಿ ನಗರದ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿ ಮಿಚೆಲ್‌ ನಜರೇತ್‌ 392 ಅಂಕ(ಶೇ.98) ಮತ್ತು ವಿದ್ಯಾ ನಿಕೇತನ್‌ ಶಾಲೆಯ ಪ್ರಿಯ ನವೀನ್‌ ಕಿಣಿ ಕೂಡ 392 ಅಂಕ ಪಡೆಯುವ ಮೂಲಕ ಅತಿ ಹೆಚ್ಚು ಅಂಕ ಗಳಿಸಿದ ರಾಜ್ಯದ ವಿದ್ಯಾರ್ಥಿಗಳೆನಿಸಿದ್ದಾರೆ.

ಮಲ್ಯ ಅದಿತಿ ಶಾಲೆಯ ಸಿಂಧೂರ್‌ ಗಣೇಶ್‌, ಪೈ ಕೃಷ್ಣ ಮೂರ್ತಿ, ಬಿಷಫ್ ಕಾಟನ್‌ ಬಾಲಕಿಯರ ಕಾಲೇಜಿನ ದಿವಿನ್ಯಾ ಬ್ಯಾನರ್ಜಿ, ವಿದ್ಯಾನಿಕೇತನ್‌ನ ಬಿ.ಎಸ್‌.ಪ್ರಣಯ್‌ ಅವರುಗಳು ತಲಾ ಶೇ.97.75ರಷ್ಟು ಫ‌ಲಿತಾಂಶ ಪಡೆದುಕೊಂಡಿದ್ದಾರೆ.

ಈ ಬಾರಿ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಬರೆದಿದ್ದ ರಾಜ್ಯದ 14,130 ವಿದ್ಯಾರ್ಥಿಗಳಲ್ಲಿ 33 ಮಂದಿ ಮಾತ್ರ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದಾರೆ. ಇನ್ನು ರಾಜ್ಯದ 1,418 ವಿದ್ಯಾರ್ಥಿಗಳು ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ಬರೆದಿದ್ದು, ಅವರಲ್ಲಿ ಏಳು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯ ಫ‌ಲಿತಾಂಶ ಉತ್ತಮ:
ಐಸಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಯ ರಾಷ್ಟ್ರಮಟ್ಟದ ಫ‌ಲಿತಾಂಶಕ್ಕೆ ಹೋಲಿಸಿದರೆ, ರಾಜ್ಯದ ವಿದ್ಯಾರ್ಥಿಗಳ ಫ‌ಲಿತಾಂಶ ಉತ್ತಮವಾಗಿ ಬಂದಿದೆ. ಫ‌ಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
10ನೇ ತರಗತಿ ಪರೀಕ್ಷೆ ಬರೆದಿದ್ದ ದೇಶದ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ ಶೇ.98.50ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, 12ನೇ ತರಗತಿ ಪರೀಕ್ಷೆಯಲ್ಲಿ ಶೇ.96.46ರಷ್ಟು ಫ‌ಲಿತಾಂಶ ಬಂದಿದೆ. ಆದರೆ, 10ನೇ ತರಗತಿ ಪರೀಕ್ಷೆ ಬರೆದಿದ್ದ ಕರ್ನಾಟಕದ ವಿದ್ಯಾರ್ಥಿಗಳ ಪೈಕಿ ಶೇ.99.77ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ, 12ನೇ ತರಗತಿ ಪರೀಕ್ಷೆಯಲ್ಲೂ ಶೇ.99.51ರಷ್ಟು ರಾಜ್ಯದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಳೆದ ವರ್ಷದ ಫ‌ಲಿತಾಂಶಕ್ಕೆ ಹೋಲಿಸಿದರೆ ದೇಶದ ಒಟ್ಟಾರೆ ಫ‌ಲಿತಾಂಶದಲ್ಲಿ 10ನೇ ತರಗತಿಯಲ್ಲಿ ಶೇ.0.01ರಷ್ಟು ಮತ್ತು 12ನೇ ತರಗತಿಯಲ್ಲಿ ಶೇ.0.18ರಷ್ಟು ಏರಿಕೆಯಾಗಿದೆ.
-ಉದಯವಾಣಿ

Write A Comment