ಕರ್ನಾಟಕ

ನೀರಿನಲ್ಲೂ ಅವ್ಯವಹಾರ: ಪಾಟೀಲ್ ರಾಜೀನಾಮೆಗೆ ಶೆಟ್ಟರ್ ಆಗ್ರಹ

Pinterest LinkedIn Tumblr

Jagadish-shettar1ಬೆಂಗಳೂರು, ಮೇ ೬- ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ ಹಾಗೂ ನೀರಿನ ಪರೀಕ್ಷೆ ಪ್ರಯೋಗಾಲಯಗಳ ಸ್ಥಾಪನೆಯಲ್ಲಿ ನೂರಾರು ಕೋಟಿ ರೂ. ಗಳ ಭ್ರಷ್ಟಾಚಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದು ಇಲ್ಲಿ ಆಗ್ರಹಿಸಿದರು.
ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದಲ್ಲಿ 7 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುವುದಾಗಿ ಸಚಿವ ಪಾಟೀಲ್ ಅವರು ಹೇಳಿದ್ದರು. ಇದುವರೆಗೂ 5,133 ಘಟಕಗಳಿಗೆ ಅನುಮೋದನೆ ನೀಡಲಾಗಿದ್ದು, ಇಲ್ಲಿಯವರೆಗೆ 1,560 ಘಟಕಗಳನ್ನು ಮಾತ್ರ ಅಳವಡಿಸಲಾಗಿದೆ.
ವಾಸ್ತವವಾಗಿ 1,189 ಘಟಕಗಳು ಮಾತ್ರವೇ ಕಾರ್ಯಾರಂಭ ಮಾಡಿವೆ ಎಂದು ಅವರು ಹೇಳಿದರು.
ಈ ಘಟಕಗಳ ಸ್ಥಾಪನೆಗೆ 334 ಕೋಟಿ 88 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದರೆ, ಇದುವರೆಗೂ 125 ಕೋಟಿ 80 ಲಕ್ಷ ಖರ್ಚು ಮಾಡಲಾಗಿದೆ. ಈ ಘಟಕಗಳ ಸ್ಥಾಪನೆಯಲ್ಲೂ ಭಾರಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ಮಾಡುವ ಅಗತ್ಯವಿದೆ ಎಂದರು.
ನೀರಿನ ಪರೀಕ್ಷೆ ಪ್ರಯೋಗಾಲಯಗಳನ್ನು 80 ತಾಲ್ಲೂಕುಗಳಲ್ಲಿ 190 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭಿಸಲು ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಮೆII ಪ್ರಸಾದ ರಾಯಪಾಟಿ ಎಂಬುವವರಿಗೆ ಸಹಾಯ ಮಾಡಲೆಂದೇ ಏಕವ್ಯಕ್ತಿಗೆ ಟೆಂಡರ್ ನೀಡಲಾಗಿದೆ. ಇದರಿಂದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಆರೋಪಿಸಿದರು.
ಮೊದಲ ಬಾರಿಗೆ 80 ತಾಲ್ಲೂಕುಗಳಲ್ಲಿ ಟೆಂಡರ್ ಮೂಲಕ ಈ ಪ್ರಯೋಗಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದ್ದು, ಆ ನಂತರ ಎರಡು ಬಾರಿ ಟೆಂಡರ್ ಕರೆಯದೆ 20 ಮತ್ತು 46 ತಾಲ್ಲೂಕುಗಳಲ್ಲಿ ಪ್ರಯೋಗಾಲಯಗಳ ಸ್ಥಾಪನೆಗೆ ಅದೇ ವ್ಯಕ್ತಿಗೆ ನೀಡಿರುವುದರಿಂದ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗುತ್ತಿದೆ. ಇಷ್ಟೆಲ್ಲ ನಡೆದಿದ್ದರೂ, ಸಚಿವರು ಕಣ್ಣುಮುಚ್ಚಿ ಕುಳಿತ್ತಿದ್ದಾರೆ ಎಂದರೆ, ಅವರೂ ಕೂಡ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ ಎಂದು ಅವರು ಆರೋಪಿಸಿದರು.
ಈ ಎಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಸಚಿವ ಪಾಟೀಲರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು ಅಕ್ರಮಗಳ ತನಿಖೆಗೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದರು.
ನ್ಯಾಯಾಂಗ ತನಿಖೆಯಾದರೂ ಸರಿ, ಐಎ‌ಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿದರೂ ಸರಿಯೇ, ಯಾವುದಾದರೊಂದು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಅಶ್ವತ್ಥ್ ನಾರಾಯಣ, ವಿಜಯ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Write A Comment