ಕರ್ನಾಟಕ

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆರೋಗ್ಯಕೇಂದ್ರ, 108 ಆಂಬ್ಯುಲೆನ್ಸ್ ಸೇವೆ

Pinterest LinkedIn Tumblr

kempeಬೆಂಗಳೂರು,ಮೇ 4 -ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 76ನೇ ಬಸ್ ದಿನಾಚರಣೆ ಅಂಗವಾಗಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದಿನಿಂದ ಆರೋಗ್ಯಕೇಂದ್ರ ಹಾಗೂ 108 ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿರುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಳಗ್ಗೆ 6ರಿಂದ ರಾತ್ರಿ 10ರವರೆಗೂ ಆರೋಗ್ಯ ಕೇಂದ್ರ ಸೇವೆಯನ್ನು ಒದಗಿಸಲಿದ್ದು, ಮಧುಮೇಹ, ರಕ್ತದೊತ್ತಡ ಪರೀಕ್ಷಾ ಸೌಲಭ್ಯ ಒದಗಿಸಲಾಗಿದೆ. ಬಸ್ ದಿನಾಚರಣೆ ಅಂಗವಾಗಿ ಐದು ಹೊಸ ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು , ಪೀಣ್ಯ 2ನೇ ಹಂತದಿಂದ 370 ಎಂ ಬಸ್ , ವೈಟ್‌ಫೀಲ್ಡ್ ಬಿಟಿಎಂಸಿ ನಿಲ್ದಾಣದಿಂದ 331 ಎಂ, ಜಯನಗರ ಬಸ್‌ನಿಂದ 215 ಸಿಸಿ , ಹೊಸಕೋಟೆಯಿಂದ 500 ಎಚ್.ಕೆ ಹಾಗೂ ಕೆ.ಆರ್.ಮಾರ್ಕೆಟ್‌ನಿಂದ 287 ಡಿ ಬಸ್‌ಗಳನ್ನು ಪ್ರಾರಂಭಿಸಲಾಗಿದೆ.

ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿಲ್ಲ:

ಮೆಟ್ರೊ ರೈಲು ಪ್ರಾರಂಭವಾಗಿದ್ದರೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿಲ್ಲ. ಒಂದು ವೇಳೆ ಕಡಿಮೆಯಾದರೂ ತೊಂದರೆಯಿಲ್ಲ. ಲಾಭ ಮಾಡುವ ಉದ್ದೇಶವಿಲ್ಲ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆಯಾಗಬೇಕು, ಟ್ರಾಫಿಕ್ ಸಮಸ್ಯೆ ಬಗೆಹರಿಯಬೇಕು ಎಂದರು. ಮೆಟ್ರೊ ರೈಲು ಯೋಜನೆ 2ನೇ ಹಂತ ಪೂರ್ಣಗೊಳ್ಳಲು ಐದಾರು ವರ್ಷ ಬೇಕಾಗುತ್ತದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾದಲ್ಲಿ ಬಸ್ ಸುತ್ತುವಳಿಗಳನ್ನು ಕಡಿಮೆ ಮಾಡಲಾಗುತ್ತದೆ.ಸದ್ಯಕ್ಕೆ 13,600ಶೆಡ್ಯುಲ್ ಇದ್ದು ಒಂದು ನಿಮಿಷಕ್ಕೆ 12 ಬಸ್‌ಗಳು ಸಂಚಾರ ಮಾಡುತ್ತವೆ. 50 ಲಕ್ಷ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸಲಾಗುವುದು ಎಂದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಕ್‌ರೂಪ್ ಕೌರ್ ಮಾತನಾಡಿ, ಬಯ್ಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಿಎಂಟಿಸಿ ಸದ್ಯಕ್ಕೆ ನಷ್ಟದಿಂದ ಪಾರಾಗಿದೆ. ಆದರೆ ಬಸ್ ಸಂಚಾರದ ಆದಾಯ ಇನ್ನು ನಷ್ಟದಲ್ಲೇ ಇದೆ ಎಂದರು.

ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್. ಆರಾಧ್ಯ , ಸಂಸದೀಯ ಕಾರ್ಯದರ್ಶಿ ಅರವಿಂದ್ ಜಾದವ್, ಬಿಎಂಟಿಸಿ ಪ್ರಧಾನ ವ್ಯವಸ್ಥಾಪಕ ವೇಣುಕೇಶ್ವರ್, ಉಪಸಂಚಾರ ವ್ಯವಸ್ಥಾಪಕ ನಾಗರಾಜ್, ಮೇಯರ್ ಮಂಜುನಾಥ್ ರೆಡ್ಡಿ, ಉಪಮೇಯರ್ ಹೇಮಲತಾ ಗೋಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು.

Write A Comment