ಕರ್ನಾಟಕ

ಮೇಲ್ಮನೆ ಪ್ರವೇಶಕ್ಕೆ ಪೈಪೋಟಿ

Pinterest LinkedIn Tumblr

con-BJP-jds-715x350ಬೆಂಗಳೂರು, ಮೇ ೪- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಮುಂದಿನ ತಿಂಗಳು ನಡೆಯಲಿರುವ ಹಾಗೂ ಮೂವರು ನಾಮಕರಣ ಸದಸ್ಯರ ಸ್ಥಾನಗಳಿಗೆ ಅಭ್ಯರ್ಥಿಗಳಾಗಲು ಈಗಾಗಲೇ ಆಡಳಿತರೂಢಾ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಲಾಬಿ ಶುರುವಾಗಿದೆ.
ನಾಮಕರಣ ಸದಸ್ಯರ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.
ನಾಮ ನಿರ್ದೇಶನಗೊಂಡಿದ್ದ ಸದಸ್ಯರ ಪೈಕಿ ಪ್ರೊ. ಪಿ.ವಿ. ಕೃಷ್ಣಭ‌ಟ್ ಹಾಗೂ ನಟ ಜಗ್ಗೇಶ್ ಫೆ. 3 ರಂದೆ ನಿವೃತ್ತಿಯಾಗಿದ್ದು, ಬಿಜೆಪಿಯ ಲೆಹರ್‌ಸಿಂಗ್ ಸಿರೋಯ ಈ ತಿಂಗಳ 28 ರಂದು ನಿವೃತ್ತಿಯಾಗಲಿದ್ದಾರೆ. ಈ ಮೂರು ಸ್ಥಾನಗಳಿಗೆ ನಾಮಕರಣ ಮಾಡುವ ಕುರಿತು ಇಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ.
ಜೂನ್ 14 ರಂದು ಬಿಜೆಪಿಯ ಅಶ್ವತ್ಥ್‌ನಾರಾಯಣ, ನಾರಾಯಣ ಸಾ. ಬಾಂಡಗೇ, ಸಿ.ಎಚ್. ವಿದ್ಯಾಶಂಕರ್, ವಿ. ಸೋಮಣ್ಣ ಅವರು ನಿವೃತ್ತಿಯಾಗಲಿದ್ದಾರೆ. ಕಾಂಗ್ರೆಸ್‌ನ ಡಾ. ವೀರಣ್ಣಮತ್ತಿಕಟ್ಟಿ, ಆರ್.ವಿ. ವೆಂಕಟೇಶ್ ಹಾಗೂ ಜೆಡಿಎಸ್‌ನ ಎಂ. ಶ್ರೀನಿವಾಸ್ ನಿವೃತ್ತಿಯಾಗಲಿದ್ದು, ಈ ಸ್ಥಾನಗಳಿಗಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ.
ಆಡಳಿತರೂಢಾ ಕಾಂಗ್ರೆಸ್ ಮೇಲ್ಮನೆಯಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ನಾಮಕರಣ ಸದಸ್ಯರ ಜತೆಗೆ ವಿಧಾನಸಭೆಯಿಂದ ಪರಿಷತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಆಯ್ಕೆ ಮಾಡಲು ಕಾರ್ಯತಂತ್ರ ರೂಪಿಸಿದೆ.
ಸಂಖ್ಯಾಬಲದ ಮೇಲೆ ಬಿಜೆಪಿ ಕೂಡಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಜೆಡಿಎಸ್‌ನ ಕಾರ್ಯತಂತ್ರ ಏನೆಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.
ನಾಮನಿರ್ದೇಶನ ಸದಸ್ಯ ಸ್ಥಾನಕ್ಕೆ ಚಲನಚಿತ್ರ ರಂಗ, ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳ ಗಣ್ಯರು ತಮ್ಮ ತಮ್ಮ ನೆಚ್ಚಿನ ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ.
ವಿಧಾನಸಭೆಯಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಡಾ. ವೀರಣ್ಣಮತ್ತಿಕಟ್ಟಿ ಮತ್ತು ಆರ್.ವಿ. ವೆಂಕಟೇಶ್ ಪುನರಾಯ್ಕೆ ಆಗಲು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಉಳಿದ ಸ್ಥಾನಗಳಿಗೆ ಯಾಱ್ಯಾರು ಅಭ್ಯರ್ಥಿಗಳು ಆಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

Write A Comment