ಕರ್ನಾಟಕ

ಎಸ್ಸಿ,,ಎಸ್‌ಟಿ ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್

Pinterest LinkedIn Tumblr

pt-paramaeshwarಬೆಂಗಳೂರು, ಮೇ ೩: ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಬೇತಿಗೆ ಮತ್ತು ಮನೆಗೆ ತಲುಪುವಂತಾಗಲು ಅವರಿಗೆ ಉಚಿತ ಸೈಕಲ್ ನೀಡುವುದಾಗಿ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೫೬ ಸರ್ಕಾರಿ ಹಾಗೂ ೧೧೬೦ ಖಾಸಗಿ ಐಟಿಐ ಕಾಲೇಜುಗಳಲ್ಲಿ ಒಟ್ಟು ೨೩ ಸಾವಿರ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸಮವಸ್ತ್ರ ಮತ್ತು ಶೂಗಳನ್ನು ನೀಡಲಾಗಿದೆ. ಈ ವರ್ಷದಿಂದ ಅವರಿಗೆ ಸೈಕಲ್ ಕೂಡ ನೀಡಲಾಗುತ್ತಿದ್ದು, ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್
ಐಟಿಐ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು “ಇಂಗ್ಲಿಷ್ ಮೆಂಟರ್” ಎಂಬ ಹೊಸ ಕೋರ್ಸ್ ಆರಂಭಿಸಲಾಗುತ್ತಿದೆ. ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಭಾಷಾ ಸಾಮರ್ಥ್ಯ, ಸಂವಹನ ಕಲೆ ವೃದ್ಧಿಯಾಗಲಿದೆ. ಐಟಿಐ ತರಬೇತಿಯ ಜತೆ ದಿನಕ್ಕೆ ಒಂದು ಗಂಟೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ನ್ನು ಹೇಳಿಕೊಡಲಾಗುವುದು. ಇದಕ್ಕಾಗಿ ಆಟೋಮೆಟಿಕ್ ಇಂಗ್ಲಿಷ್ ಕಿಟ್ ನೀಡಲಾಗುವುದು ಎಂದು ತಿಳಿಸಿದರು.
ಕನಿಷ್ಠ ವೇತನ ನೀತಿಯನ್ನು ೨೭ ಉದ್ಯಮಗಳಲ್ಲಿ ಜಾರಿಗೊಳಿಸಲಾಗಿದ್ದು, ಮುದ್ರಣ, ಕೋಳಿಸಾಕಾಣಿಕೆ ಸೇರಿದಂತೆ ನಾಲ್ಕು ಉದ್ಯಮಗಳ ಕನಿಷ್ಠ ವೇತನ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ. ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಕಾರ್ಮಿಕರ ಹಿತರಕ್ಷಣೆ ಮಾಡಲು ಇದೇ ೬ರಂದು ಸಂಜೆ ೪.೩೦ಕ್ಕೆ ವಿಧಾನಸೌಧದಲ್ಲಿ ಉದ್ಯಮಿಗಳ ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ನಿರುದ್ಯೋಗಿಗಳಿಗೆ ಅಗತ್ಯ ತರಬೇತಿ ನೀಡಿ ಕೆಲಸ ಕೊಡಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿ ಎಚ್‌ಆರ್‌ಡಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ೧೨ ಜಿಲ್ಲೆಗಳಲ್ಲಿ ಈ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿವೆ. ಉಳಿದ ಜಿಲ್ಲೆಗಳಲ್ಲಿ ತಿಂಗಳಾಂತ್ಯಕ್ಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ನಿಧಿಯಲ್ಲಿ ೪ ಸಾವಿರ ಕೋಟಿ ಹೆಚ್ಚಿನ ಹಣ ಇದೆ. ಇದನ್ನು ಬಳಸಿಕೊಂಡು ೩೫೦ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾರ್ಮಿಕರ ಕೌಶಲ್ಯಾಭಿವೃದ್ಧಿ ಅಕಾಡೆಮಿ ಸ್ಥಾಪಿಸಲಾಗುವುದು. ಅಕಾಡಮಿಗೆ ಇದೇ ೧೪ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉಳಿದಂತೆ ಒಟ್ಟು ೧೨ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರಿಗೆ ಪಿಂಚಣಿ ನೀಡುವ ಯೋಜನೆಯನ್ನು ಈ ವರ್ಷದಿಂದ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ೧೨೦೦ ಕಾರ್ಮಿಕರನ್ನು ಪಿಂಚಣಿಗಾಗಿ ಆಯ್ಕೆ ಮಾಡಲಾಗಿದೆ. ಐಟಿಐ ಮುಗಿಸಿ ಒಂದು ವರ್ಷ ಗುತ್ತಿಗೆ ಅವಧಿಯಲ್ಲಿ ಕೆಲಸ ಮಾಡಿ ನಂತರ ನಿರುದ್ಯೋಗಿಗಳಾಗುವ ಅಭ್ಯರ್ಥಿಗಳಿಗಾಗಿ ವಿಶೇಷ ತರಬೇತಿ ನೀಡಲು ಇಲಾಖೆ ಚಿಂತನೆ ನಡೆಸಿದೆ ಎಂದರು.

ಉಚಿತ ಸಹಾಯವಾಣಿ
ಗಾರ್ಮೆಂಟ್ಸ್ ಹಾಗೂ ಇತರೆ ಉದ್ಯಮಗಳಲ್ಲಿ ಲೈಂಗಿಕ ಕಿರುಕುಳಗಳು ನಡೆದರೆ ನೇರವಾಗಿ ತಮಗೆ ದೂರು ನೀಡುವಂತೆ ಹೇಳಿದ ಸಚಿವರು, ಸಂತ್ರಸ್ತ ಮಹಿಳಾ ಕಾರ್ಮಿಕರು ತಮ್ಮ ಖಾಸಗಿ ದೂರವಾಣಿ ೯೪೪೮೧೨೦೭೫೫ ಸಂಪರ್ಕಿಸಿ ದೂರು ನೀಡಬಹುದು. ಮುಂದಿನ ಒಂದೆರಡು ವಾರಗಳಲ್ಲಿ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸುವುದಾಗಿ ಇದೇ ವೇಳೆ ಅವರು ತಿಳಿಸಿದರು.
ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲು ೨೦೦ ಬಸ್‌ಗಳನ್ನು ನೀಡಲು ಸರ್ಕಾರ ಸಿದ್ಧವಿತ್ತು. ಆದರೆ, ಕಾರ್ಮಿಕ ಮಹಿಳಾ ಸಂಘಟನೆಗಳೇ ಇದಕ್ಕೆ ಕಾಲಾವಕಾಶ ಕೇಳಿವೆ. ಹೀಗಾಗಿ ಇದನ್ನು ತಡೆಹಿಡಿಯಲಾಗಿದೆ. ಶೀಘ್ರವೇ ಸಂಘಟನೆಗಳ ಜತೆ ಚರ್ಚೆ ಮಾಡಿ ಪ್ರತ್ಯೇಕ ಸಾರಿಗೆ ವ್ಯವಸ್ಥೆಯನ್ನು ಆರಂಭಿಸುವುದಾಗಿ ಹೇಳಿದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರು ಕಾರ್ಖಾನೆಗಳಲ್ಲಿರುವ ದೂರು ಪೆಟ್ಟಿಗೆಯಲ್ಲಿ ತಮ್ಮ ಅಹವಾಲು ಹಾಕಬಹುದು. ಅದನ್ನು ಆಡಳಿತ ಮಂಡಳಿಗಳ ಬದಲು ಕಾರ್ಮಿಕ ಇಲಾಖೆ ಅಧಿಕಾರಿಗಳೇ ತೆಗೆದು ನೋಡುವಂತಹ ವ್ಯವಸ್ಥೆ ರೂಪಿಸುವುದಾಗಿ ಪರಮೇಶ್ವರ್ ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಶಾಸಕ ಭೀಮಾನಾಯಕ್ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡಿದ್ದಾರೆ ಎಂಬ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದು ಹಫ್ತಾ ವಸೂಲಿ ಪ್ರಕರಣ ಅಲ್ಲ. ಅಲ್ಲಿ ಮಾತಿನ ಚಕಮಕಿ ಮಾತ್ರ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು. ಮುಖ್ಯಮಂತ್ರಿ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

Write A Comment