ಕರ್ನಾಟಕ

ಉದ್ಘಾಟನೆಯಾದ ಎರಡೇ ದಿನಕ್ಕೇ ಬಯಲಾಯ್ತು ಮೆಟ್ರೋ ಕಳಪೆ ಕಾಮಗಾರಿ?

Pinterest LinkedIn Tumblr

truck-mejestic-metro

ಬೆಂಗಳೂರು: ದಕ್ಷಿಣ ಭಾರತದ ಮೊಟ್ಟ ಮೊದಲ ಸುರಂಗ ಮೆಟ್ರೋ ಎಂಬ ಖ್ಯಾತಿಗೆ ಕಾರಣವಾಗಿರುವ ನಮ್ಮ ಮೆಟ್ರೋ ಉದ್ಘಾಟನೆಯಾಗಿ ಎರಡೇ ದಿನಕ್ಕೆ ಅದರ ಕಳಪೆ ಕಾಮಗಾರಿಯ ದರ್ಶನ  ಬೆಂಗಳೂರಿಗರಿಗೆ ಆಗಿದೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಸಮೀಪ ಹಾದು ಹೋಗಿರುವ ಮೆಟ್ರೋ ಸುರಂಗ ಮಾರ್ಗದ ಬಳಿ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ಸರಕು ಸಾಗಣಾ ಟೆಂಪೊ ಒಂದು ದಿಢೀರ್ ನೆಲಕ್ಕೆ ಕುಸಿದು  ಹೋಗಿದ್ದು, ಇಡೀ ರಾತ್ರಿ ಆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥವಾದ ಘಟನೆ ನಡೆದಿದೆ. ಚಿಕ್ಕಪೇಟೆಯಿಂದ ಚಿಕ್ಕಬಳ್ಳಾಪುರಕ್ಕೆ ಸರಕು ತುಂಬಿಕೊಂಡು ಹೋಗುತ್ತಿದ್ದ ಟೆಂಪೋ, ಮೆಜೆಸ್ಟಿಕ್ ಸುರಂಗದ  ಮೇಲ್ಭಾಗದಲ್ಲಿ ಬರುತ್ತಿದ್ದಂತೆ ಹಿಂಬದಿಯ ಬಲ ಭಾಗದ ಚಕ್ರಗಳು ಇದ್ದಕ್ಕಿದ್ದಂತೆ ಕುಸಿದಿವೆ. ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದರೂ ಸಹ ಟ್ರಾಫಿಕ್ ಪೊಲೀಸರು ಕುಸಿದ  ಟೆಂಪೋವನ್ನು ತೆರವುಗೊಳಿಸಿರಲಿಲ್ಲ. ಬೆಳಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳ ಪ್ರಕಟವಾದ ಬಳಿಕ ಟೆಂಪೋವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.

ಇನ್ನು ಈ ಬಗ್ಗೆ ಮೆಟ್ರೋ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರಿಂದ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ಟೆಂಪೋ ಚಾಲಕ ಹೇಳಿದ್ದಾರೆ. ಮೆಟ್ರೋ ಸುರಂಗ ಮಾರ್ಗ ಹಾದು ಹೋಗಿರುವ ಈ  ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಅತಿ ಭಾರದ ವಾಹನಗಳು ಸಂಚರಿಸುತ್ತವೆ. ಹೀಗಾಗಿ ಸಾರ್ವಜನಿಕರಲ್ಲಿ ಪ್ರಸ್ತುತ ಘಟನೆ ಆತಂಕ ಉಂಟುಮಾಡಿದೆ. ಇನ್ನು ಇಂತಹುದೇ ಘಟನೆ ಈ ಹಿಂದೆ  ಮೈಸೂರು ಬ್ಯಾಂಕ್ ವೃತ್ತದ ಸಮೀಪದ ಕಲಾ ಕಾಲೇಜು ರಸ್ತೆಯಲ್ಲಿಯೂ ಸಂಭವಿಸಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಧ್ಯ ವಯಸ್ಕರೊಬ್ಬರು ಇದ್ದಕ್ಕಿದ್ದಂತೆಯೇ 6 ಅಡಿ ಆಳಕ್ಕೆ ಕುಸಿದು  ಬಿದ್ದಿದ್ದರು. ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಆ ರಸ್ತೆಗೆ ಮೆಟ್ರೋ ಅಧಿಕಾರಿಗಳು ಡಾಂಬರೀಕರಣ ಮಾಡಿದ್ದರು.

ಬೆಂಗಳೂರಿಗೆ ಮೆಟ್ರೋ ಬಂದ ಖುಷಿ ಒಂದೆಡೆಯಾದರೂ, ಈ ಎರಡೂ ಘಟನೆಗಳು ಮತ್ತೆ ಎಲ್ಲಿ ಯಾವ ರಸ್ತೆ ಕುಸಿಯುತ್ತದೋ ಎಂಬ ಆತಂಕವನ್ನು ತಂದೊಡ್ಡಿದೆ.

Write A Comment