ಕನ್ನಡ ವಾರ್ತೆಗಳು

ರೈತರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಿದ್ದೇವೆ: ಸಚಿವ ಸೊರಕೆ | ಸಿದ್ದಾಪುರದಲ್ಲಿ ನಡೆದ ರೈತರ ವಿಚಾರಗೋಷ್ಟಿ

Pinterest LinkedIn Tumblr

ಉಡುಪಿ: ರೈತರ ಹಿತಾಸಕ್ತಿಯ ವಿಚಾರದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ೯ ಬೇಡಿಕೆಗಳ ಬಗ್ಗೆ ಚರ್ಚೆ ಮತ್ತು ಪರಿಹಾರ ಸೂತ್ರಗಳ ಕಂಡುಕೊಳ್ಳುವ ನೆಲೆಯಲ್ಲಿ ಮೇ.೩ರಂದು ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ರೈತ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಸಿದ್ಧಾಪುರದ ಸತ್ಯಾಗ್ರಹ ವೃತ್ತದ ಬಳಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಿದ್ದೇವೆ ಎಂದು ಅವರು ಹೇಳಿದರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ವಿ.ಪೂಜಾರಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

Kundapura_Varahi Siddapura_Protest (3) Kundapura_Varahi Siddapura_Protest (2) Kundapura_Varahi Siddapura_Protest (11) Kundapura_Varahi Siddapura_Protest (10) Kundapura_Varahi Siddapura_Protest (12) Kundapura_Varahi Siddapura_Protest (8) Kundapura_Varahi Siddapura_Protest (4) Kundapura_Varahi Siddapura_Protest (9) Kundapura_Varahi Siddapura_Protest (6) Kundapura_Varahi Siddapura_Protest (7) Kundapura_Varahi Siddapura_Protest (5) Kundapura_Varahi Siddapura_Protest (1) Kundapura_Varahi Siddapura_Protest (13)

ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ರೈತ ಸಂಘದ ಒತ್ತಾಸೆಯ ಫಲವಾಗಿ 35 ವರ್ಷಗಳ ಬಳಿಕ 2015ರ ಮೇ 4ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಯೋಜನೆಯನ್ನು ಉದ್ಘಾಟಿಸಿದರು. ಅದಾಗಿ ಈಗ ಒಂದು ವರ್ಷ ಕಳೆಯುತ್ತಾ ಬಂದಿದೆ. ಕೆಲವೆಡೆ ರೈತರು ಖುಷಿ ಪಟ್ಟಿದ್ದಾರೆ. ನೀರು ಹರಿವಿಕೆಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಆದರೆ 48 ಕಿ.ಮೀ. ತನಕ ನೀರು ಹಾಯಿಸಿದ ಬಳಿಕ, ಈವತ್ತಿನ ತನಕ ಯೋಜನೆ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿಲ್ಲ. ಒಂದು ವರ್ಷದಲ್ಲಿ ಗಣನೀಯವಾದ ಪ್ರಗತಿ ಕಾಣುತ್ತಿಲ್ಲ. ಈ ಯೋಜನೆಯ ಎಡದಂಡೆ ಕಾಲುವೆಯ ಜೊತೆಯಲ್ಲಿ ಬಲದಂಡೆ ಹಾಗೂ ಏತನೀರಾವರಿ ಯೋಜನೆಗಳು ಶೀಘ್ರ ಆರಂಭವಾಗಬೇಕಿದೆ ಎಂದು ಅವರು ಒತ್ತಾಯಿಸಿದರು.

ಕುಮ್ಕಿ ಹಕ್ಕನ್ನು ರೈತರು ಅದೆಷ್ಟೋ ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದರು. ಕೃಷಿಗೆ ಪೂರಕವಾಗಿ ರೈತರು ಕುಮ್ಕಿ ಜಮೀನನ್ನು ಬಳಕೆ ಮಾಡುತ್ತಿದ್ದರು. ಇವತ್ತು ಅರಣ್ಯ ಉಳಿದಿದ್ದರೆ ಅದು ಕುಮ್ಕಿಯಿಂದಾಗಿ. ಕುಮ್ಕಿ ಎನ್ನುವ ವಿಶೇಷ ಸೌಲಭ್ಯ ರೈತರ ಹಕ್ಕಾಗಿ ಉಳಿಯಬೇಕು ಎಂದು ಹೇಳಿದ ಅವರು, ಇನ್ನೊಂದೆಡೆ ಡೀಮ್ಡ್ ಫಾರೆಸ್ಟ್ ಎನ್ನಲಾಗುತ್ತಿದೆ. ಕೆಲವೆಡೆ ಮರಗಳೆ ಇಲ್ಲದ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸಲಾಗಿದೆ. ೯೪ ಸಿ ಹುಟ್ಟಿಕೊಳ್ಳಲು ಸರ್ಕಾರವೇ ಕಾರಣ. 16 ವರ್ಷಗಳಿಂದ ಸರ್ಕಾರ ನಿವೇಶನ ಹಂಚಿಕೆ ಮಾಡದ ಪರಿಣಾಮ ಜನ ಸಿಕ್ಕ ಸಿಕ್ಕ ಜಾಗದಲ್ಲಿ ಮನೆ ಕಟ್ಟಿಕೊಂಡರು. ಅದರಿಂದ 94ಸಿ ಸಮಸ್ಯೆ ಉಂಟಾಗಿದೆ. ಈಗ ವಾಸ್ತವ್ಯ ಇರುವ ಸ್ಥಳವನ್ನು ಸಕ್ರಮವಾಗಿಸಿಕೊಡಬೇಕಾಗಿದೆ ಎಂದರು.

ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ 2000ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಲಾಗಿಲ್ಲ. ಬೇರೆ ಬೇರೆ ಕಾರಣಗಳನ್ನು ನೀಡಲಾಗುತ್ತಿಲ್ಲ. ಅಧಿಕಾರಿಗಳ ವರ್ತನೆಗೆ ಜನ ಸಮಾನ್ಯರು ಬೇಸೆತ್ತು ಹೋಗಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಈ ಹಿನ್ನೆಡೆಗೆ ಕಾರಣವಾಗಿದೆ. ಜನರಿಗೆ ಅವಶ್ಯಕತೆ ಇದ್ದರೂ ಇವತ್ತು ತಹಶೀಲ್ದಾರರು ಸಿಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ಗೋಪಾಲ ಪೂಜಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ವಿ.ಪೂಜಾರಿ, ಪ್ರಗತಿಪರ ಕೃಷಿಕ ಕೆಂಚನೂರು ಸೋಮಶೇಖರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಕೃಷ್ಣರಾಜ ಹೆಗ್ಡೆ ಮೊದಲಾದವರು ವಿಚಾರ ಮಂಡಿಸಿದರು. ಮೀನುಗಾರಿಕಾ ನಿಗಮದ ಅಧ್ಯಕ್ಷ ಬಿ.ಹೆರಿಯಣ್ಣ ಚಾತ್ರಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಸಿದ್ಧಾಪುರ ಗ್ರಾ.ಪಂ.ಉಪಾಧ್ಯಕ್ಷ ಭರತ್ ಕಾಮತ್, ಸಂಪಿಗೇಡಿ ಸಂಜೀವ ಶೆಟ್ಟಿ, ಮಲ್ಯಾಡಿ ಸಂಜೀವ ಶೆಟ್ಟಿ, ವಿಕಾಸ್ ಹೆಗ್ಡೆ, ಹರಿಪ್ರಸಾದ್ ಶೆಟ್ಟಿ, ಜ್ಯೋತಿ ಪುತ್ರನ್, ದೇವಕಿ ಸಣ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಉಮೇಶ್ ಶೆಟ್ಟಿ ಶಾನ್ಕಟ್ಟು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಜೇಶ ಕೆ.ಸಿ ಕಾರ್ಯಕ್ರಮ ನಿರ್ವಹಿಸಿದರು.

Write A Comment