ಕರ್ನಾಟಕ

ರಾಘವೇಶ್ವರಗೆ ಹೊಸ ಸಂಕಟ : ಸೆಷೆನ್ಸ್ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

Pinterest LinkedIn Tumblr

raghaveshwara-shreeಬೆಂಗಳೂರು,ಏ.೨೮- ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಮುಕ್ತರಾಗಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಮತ್ತೆ ಕಂಟಕ ಎದುರಾಗಿದೆ.
ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಅಂಗೀಕರಿಸಿದ್ದು, ನ್ಯಾ. ಎ.ವಿ. ಚಂದ್ರಶೇಖರ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯನ್ನು ಕೈಗೆತ್ತಿಕೊಂಡು ರಾಘವೇಶ್ವರ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿ ಬೇಸಿಗೆ ರಜೆಯ ನಂತರ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದರಿಂದ ಸುಮಾರು ಎರಡು ವರ್ಷಗಳಿಂದ ಶ್ರೀಗಳು ಮತ್ತು ಗಾಯಕಿ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಮತ್ತೆ ಪುಷ್ಠಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ೨೦೧೪ರ ಮಧ್ಯಭಾಗದಲ್ಲಿ ಗಾಯಕಿ ಪ್ರೇಮಲತಾ ಅತ್ಯಾಚಾರ ಆರೋಪ ಮಾಡಿದ್ದರು. ತಮ್ಮ ತಾಯಿಯ ಮೇಲೆ ಶ್ರೀಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಂಶುಮತಿ ಶಾಸ್ತ್ರಿ ಗಿರಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಐಡಿ ಪೊಲೀಸರು ತನಿಖೆ ನಡೆಸಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ನಂತರ ನ್ಯಾಯಾಲಯದಲ್ಲಿ ಅನೇಕ ವಾದ-ವಿವಾದಗಳು ನಡೆದಿದ್ದವು. ಪ್ರಕರಣವನ್ನು ಕೈ ಬಿಡುವಂತೆ ಕೋರಿ ರಾಘವೇಶ್ವರ ಭಾರತೀ ಸ್ವಾಮಿಗಳು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಅವರ ವಿರುದ್ಧದ ವಿಚಾರಣೆಯನ್ನು ಕೈಬಿಟ್ಟಿತ್ತು.ದೂರುದಾರರ ಆರೋಪ ನಂಬುವಂತದ್ದಲ್ಲ. ಆರೋಪ ಸಾಬೀತಾಗಲು ಅಗತ್ಯ ಸಾಕ್ಷ್ಯಗಳಿಲ್ಲ. ಡಿಎನ್‌ಎ ಪರೀಕ್ಷೆಯಲ್ಲಿಯೂ ಇದು ದೃಢಪಟ್ಟಿಲ್ಲ. ಆರೋಪಿ ಮತ್ತು ದೂರುದಾರರ ಫೋನ್ ಕರೆಗಳು ಹೊಂದಾಣಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಖುಲಾಸೆಗೊಳಿಸಿ ನ್ಯಾಯಾಧೀಶ ಮುದಿಗೌಡರ್ ಆದೇಶ ನೀಡಿದ್ದರು.

ಈ ಮಧ್ಯೆ ಶ್ರೀಗಳು ತಮ್ಮ ವಿರುದ್ಧದ ಪ್ರಕರಣ ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತನಿಖೆಗೆ ಸಹಕರಿಸದ ಕಾರಣ ಶ್ರೀಗಳ ಜಾಮೀನು ರದ್ದು ಕೋರಿ ಸಿಐಡಿ ಕೂಡಾ ಅರ್ಜಿ ಸಲ್ಲಿಸಿತ್ತು. ಈ ಎರಡೂ ಅರ್ಜಿಗಳು ವಿಚಾರಣಾ ಹಂತದಲ್ಲಿದ್ದಾಗಲೇ ಪ್ರಕರಣವನ್ನು ಸೆಷನ್ಸ್ ನ್ಯಾ.ಮುದಿಗೌಡರ್ ಅವರಿಂದ ಬೇರೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಕೋರಿ ಪ್ರೇಮಲತಾ ಶಾಸ್ತ್ರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾ ಮಾಡಿತ್ತು. ಜೊತೆಗೆ ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇರುವ ಎರಡೂ ಅರ್ಜಿಗಳನ್ನು ಒಂದು ತಿಂಗಳಿನಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಿತ್ತು.

Write A Comment