ಕರ್ನಾಟಕ

ಬೆಂಗಳೂರಲ್ಲೇ ಇನ್ಮುಂದೆ ಸಿನಿಮಾ ಡಿಜಿಟಲೀಕರಣ

Pinterest LinkedIn Tumblr

Cameraಬೆಂಗಳೂರು: ಚಿತ್ರಗಳ ಡಿಜಿಟಲೀಕರಣಕ್ಕೆ ನೆರೆರಾಜ್ಯದ ಕಂಪೆನಿಗಳನ್ನು ಅವಲಂಬಿಸಿದ್ದ ಕನ್ನಡ ಚಿತ್ರೋದ್ಯಮಕ್ಕೆ ಇನ್ಮುಂದೆ ಬೆಂಗಳೂರಿನಲ್ಲೇ ಆ ಸೇವೆ ಲಭ್ಯವಾಗಲಿದೆ.

ಕರ್ನಾಟಕ ಸಿನಿಮಾ ಟೆಕ್ನಾಲಜೀಸ್‌ ಸಂಸ್ಥೆಯು ಬೆಂಗಳೂರಿನಲ್ಲೇ ಸಿನಿಮಾಗಳಿಗೆ ಅಂತಿಮ ಸ್ಪರ್ಶ ನೀಡಿ, ಡಿಜಿಟಲೀಕರಣಗೊಳಿಸುವ ನೂತನ ತಂತ್ರಜ್ಞಾನ ಪರಿಚಯಿಸಿದೆ.

ಹಾಗಾಗಿ ಇನ್ನುಮುಂದೆ ಸಿನಿಮಾಕ್ಕೆ ಅಂತಿಮ ಸ್ಪರ್ಶ ನೀಡಲು ಚೆನ್ನೈ ಅಥವಾ ಹೈದರಾಬಾದ್‌ಗೆ ಹೋಗಬೇಕಿಲ್ಲ. ಅಷ್ಟೇ ಗುಣಮಟ್ಟದ ಡಿಜಿಟಲೀಕರಣವನ್ನು ಇಲ್ಲೇ ಮಾಡಿ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಹುದು.

ಈಗಿರುವ ವ್ಯವಸ್ಥೆಯಲ್ಲಿ ಕ್ಯೂಬ್‌ ಅಥವಾ ಯುಎಫ್ಒ ಬಳಿಯೇ ಸಿನಿಮಾ ಕಂಟೆಂಟ್‌ (ಹಾರ್ಡ್‌ಡಿಸ್ಕ್) ಡಿಜಿಟಲೀಕರಣಗೊಳಿಸಿ, ಚಿತ್ರಮಂದಿರಗಳಲ್ಲಿ ಈ ಎರಡೂ ಕಂಪೆನಿಗಳು ಅಳವಡಿಸಿದ ಸರ್ವರ್‌ಗಳಲ್ಲಿ ಹಾಕಿ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಇದರಿಂದ ಲಕ್ಷಾಂತರ ರೂ. ಖರ್ಚಾಗುವುದರ ಜತೆಗೆ ಸಮಯವೂ ವ್ಯಯವಾಗುತ್ತದೆ. ಆದರೆ, ನೂತನ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿನಿಮಾ ಕಂಟೆಂಟ್‌ ಡಿಜಿಟಲೀಕರಣಗೊಳಿಸಿ, 2ಕೆ, 4ಕೆ ಗುಣಮಟ್ಟದಲ್ಲಿ ಡಿಸಿಐ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬಹುದು.

ತಂತ್ರಜ್ಞಾನ ಕುರಿತು ಮಾತನಾಡಿದ ಕರ್ನಾಟಕ ಸಿನಿಮಾ ಟೆಕ್ನಾಲಜೀಸ್‌ನ ಶಾಂತಾಕುಮಾರಿ, ಸಿನಿಮಾಕ್ಕೆ ಅಂತಿಮ ಸ್ಪರ್ಶ ನೀಡಲು ಚೆನ್ನೈ ಅಥವಾ ಹೈದ್ರಾಬಾದ್‌ಗೆ ಹೋಗಬೇಕಾದ ಸ್ಥಿತಿ ಇದೆ. ಅಲ್ಲದೆ ಒಂದು ಚಿತ್ರ ಬಿಡುಗಡೆ ಆಗಬೇಕಾದರೆ, ವಾರಕ್ಕೆ 11 ಸಾವಿರ ರೂ. ಶುಲ್ಕ ಕಟ್ಟಬೇಕು. ಇನ್ನು ಮುಂದೆ ನಿರ್ಮಾಪಕರಿಗೆ ಈ ಗೋಳು ತಪ್ಪಲಿದೆ. ಬೆಂಗಳೂರಿನಲ್ಲೇ ಈ ಸೇವೆ ಲಭ್ಯವಿದ್ದು, ಇದರಲ್ಲಿನ ಕಂಟೆಂಟ್‌ ಕೆಡಿಎಂ ಆಧಾರಿತವಾಗಿದ್ದರಿಂದ ಸುರಕ್ಷಿತವಾಗಿದೆ. ನಿರ್ಮಾಪಕರನ್ನು ಪೈರಸಿಯಿಂದ ರಕ್ಷಿಸಲಿದೆ ಎಂದು ತಿಳಿಸಿದರು.

ಇದಲ್ಲದೆ, ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಚಿತ್ರವು ಕೇವಲ ಐದು ತಾಸುಗಳಲ್ಲಿ ಅಪ್‌ಲೋಡ್‌ ಆಗಿ ಕೌÉಡ್‌ ತಂತ್ರಜ್ಞಾನ ಬಳಸಿ, ಅಮೆರಿಕದಲ್ಲಿ ಕೂಡ ಬಿಡುಗಡೆ ಮಾಡಬಹುದು. ಇದೊಂದು ಸೇವಾ ಸಂಸ್ಥೆಯಾಗಿದ್ದು, ಇಲ್ಲಿ ಯಾವುದೇ ಲಾಭ-ನಷ್ಟದ ಲೆಕ್ಕಾಚಾರವಿಲ್ಲ. ಚಿತ್ರೋದ್ಯಮದ ಹಣ ವ್ಯರ್ಥವಾಗಿ ಬೇರೆಯವರ ಪಾಲಾಗುತ್ತಿದೆ. ಅದನ್ನು ತಡೆಯುವುದು ಈ ನೂತನ ತಂತ್ರಜ್ಞಾನದ ಮುಖ್ಯ ಉದ್ದೇಶ ಎಂದೂ ಸ್ಪಷ್ಟಪಡಿಸಿದರು.

ಶಾಂತಾಕುಮಾರಿ ಪತಿ ಹಾಗೂ ಸೆನ್ಸಾರ್‌ ಮಂಡಳಿ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಇದಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗಳು ಮಾಡಬೇಕಾದ್ದಿಷ್ಟೇ. ಚಿತ್ರಮಂದಿರಗಳಲ್ಲಿರುವ ಸರ್ವರ್‌ಗಳಿಗೆ ಬೇರೆ ಕಂಟೆಂಟ್‌ಗಳನ್ನು ಹಾಕಲು ಯಾವುದೇ ಕಾರಣಕ್ಕೂ ಆಕ್ಷೇಪಿಸುವಂತಿಲ್ಲ ಎಂಬ ನಿರ್ಣಯ ಕೈಗೊಳ್ಳಬೇಕು. ಇದರಿಂದ ಕರ್ನಾಟಕ ಒಂದರಲ್ಲೇ ವರ್ಷಕ್ಕೆ 150 ಚಿತ್ರಗಳು ತೆರೆ ಕಾಣುತ್ತವೆ. ಇದಕ್ಕೆ ಪ್ರತಿಯಾಗಿ ಏನಿಲ್ಲವೆಂದರೂ 50 ಕೋಟಿ ರೂ. ಅನ್ಯರ ಪಾಲಾಗುತ್ತಿದೆ. ಆ ಹಣವನ್ನು ಉಳಿಸಬಹುದು ಎಂದರು.

ನಿರ್ಮಾಪಕರ ಶೋಷಣೆ ಮಾಡ್ತಿವೆ:
ನೂತನ ತಂತ್ರಜ್ಞಾನಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಮಂಡಿಯೂರಿ ಬಂದ ಕ್ಯೂಬ್‌ ಮತ್ತು ಯುಎಫ್ಒ ಸಂಸ್ಥೆಗಳು ಈಗ ನಿರ್ಮಾಪಕರನ್ನು ಶೋಷಣೆ ಮಾಡುತ್ತಿವೆ. ಇಡೀ ಚಿತ್ರೋದ್ಯಮದ ಹಣ ಈಗ ಈ ಕಂಪೆನಿಗಳಲ್ಲಿದೆ. ಈ ಮಧ್ಯೆ ಪರ್ಯಾಯ ವ್ಯವಸ್ಥೆಯೊಂದು ಬರುತ್ತಿರುವುದು ಆಶಾಕಿರಣ ಎಂದು ಬಣ್ಣಿಸಿದರು.

ನಮ್ಮವರೇ ಮಾಡಿದ ಈ ತಂತ್ರಜ್ಞಾನವನ್ನು ನಾವೇ ಬಳಸಿಕೊಳ್ಳದಿದ್ದರೆ ಹೇಗೆ? ಈ ತಂತ್ರಜ್ಞಾನಕ್ಕೆ ಸಂಪೂರ್ಣ ಸಹಕಾರ ಇದೆ ಎಂದೂ ಹೇಳಿದರು.

ಫಿಲ್ಮ್ ಫೆಡರೇಷನ್‌ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ರವಿ ಕೊಟ್ಟಾರ್ಕರ್‌, ಉಪಾಧ್ಯಕ್ಷರಾದ ಸಿ. ಕಲ್ಯಾಣ್‌ ಮತ್ತು ಥಾಮಸ್‌ ಡಿಸೋಜ, ನಿರ್ದೇಶಕ ಯೋಗರಾಜ್‌ ಭಟ್‌, ಲಹರಿ ವೇಲು ಮತ್ತಿತರರು ಉಪಸ್ಥಿತರಿದ್ದರು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು ಅಧ್ಯಕ್ಷತೆ ವಹಿಸಿದ್ದರು.
-ಉದಯವಾಣಿ

Write A Comment