ಕರ್ನಾಟಕ

ವೃದ್ಧ ದಂಪತಿಯ ಇರಿದು ಭೀಕರ ಕೊಲೆ

Pinterest LinkedIn Tumblr

murder

ಬೆಂಗಳೂರು: ಪುಲಕೇಶಿನಗರ ಸಮೀಪದ ಕೋಲ್ಸ್‌ ರಸ್ತೆಯ ಮೂರನೇ ಮಹಡಿಯ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಚಾಕುವಿನಿಂದ ಇರಿದು ವೃದ್ಧ ದಂಪತಿಯನ್ನು ಹತ್ಯೆಗೈದಿದ್ದಾರೆ.

ಪರ್ವತರಾಜ್ (61) ಹಾಗೂ ಚಂದ್ರಕಲಾ (55) ಕೊಲೆಯಾದ ದಂಪತಿ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಶುಕ್ರವಾರ (ಏಪ್ರಿಲ್ 22) ಮಧ್ಯಾಹ್ನ ನೆರೆಹೊರೆಯವರ ಜತೆ ಮಾತನಾಡಿದ್ದ ದಂಪತಿ, ನಂತರ ಮನೆಯಿಂದ ಹೊರ ಬಂದಿರಲಿಲ್ಲ. ಹೀಗಾಗಿ ಆ ದಿನವೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಚಿಕ್ಕಬಳ್ಳಾಪುರದ ದಂಪತಿ, 40 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಮೊದಲು ಫ್ರೇಜರ್‌ಟೌನ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ ಇವರು, 20 ವರ್ಷಗಳ ಹಿಂದೆ ಕೋಲ್ಸ್‌ ರಸ್ತೆಯಲ್ಲಿ ಮೂರು ಅಂತಸ್ತಿನ ಕಟ್ಟಡ ಕಟ್ಟಿಸಿದ್ದರು.

ಒಂದು ಮತ್ತು ಎರಡನೇ ಮಹಡಿಯ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದ ಪರ್ವತರಾಜ್, ಪತ್ನಿ ಜತೆ 3ನೇ ಅಂತಸ್ತಿನ ಮನೆಯಲ್ಲಿ ನೆಲೆಸಿದ್ದರು. ಅವರ ಮಗ ಕಿರಣ್, ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ.

ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಹೀಗಾಗಿ ಪಕ್ಕದ ಕಟ್ಟಡದವರು, ದಂಪತಿಯ ಸಂಬಂಧಿ ಮಾಲಾ ಅವರಿಗೆ ಕರೆ ಮಾಡಿದ್ದರು .ಅವರು ಮನೆಗೆ ಬಂದು ಕಿಟಕಿ ಮೂಲಕ ಇಣುಕಿದಾಗ ಪ್ರಕರಣ ಬೆಳಕಿಗೆ ಬಂದಿತು.

ಗಾಬರಿಗೊಂಡ ಮಾಲಾ, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದಾರೆ. ಬಳಿಕ ಪುಲಕೇಶಿನಗರ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ದಳದ ಜತೆ ಸ್ಥಳಕ್ಕೆ ದೌಢಾಯಿಸಿದ್ದಾರೆ.

‘ಹಂತಕರು ಪರ್ವತರಾಜ್ ಅವರ ಹೊಟ್ಟೆ ಹಾಗೂ ಎದೆಗೆ ಹತ್ತಕ್ಕೂ ಹೆಚ್ಚು ಸಲ ಇರಿದಿದ್ದಾರೆ. ಚಂದ್ರಕಲಾ ಅವರಿಗೆ ಹೊಟ್ಟೆ–ಕುತ್ತಿಗೆಗೆ ಚುಚ್ಚಿದ್ದಾರೆ. ನಡುಮನೆಯಲ್ಲೇ ಅವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಶವಗಳನ್ನು ಮಲಗುವ ಕೊಠಡಿಗೆ ಎಳೆದೊಯ್ದಿದ್ದಾರೆ. ಬಳಿಕ ಹೊರಗಿನಿಂದ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲು ಸೈಕಲ್‌ ಮಾರಾಟ ಮಳಿಗೆ ಇಟ್ಟುಕೊಂಡಿದ್ದ ಪರ್ವತರಾಜ್, ಮಗ ವಿದೇಶದಲ್ಲಿ ದುಡಿಮೆ ಪ್ರಾರಂಭಿಸಿದ ನಂತರ ಆ ವ್ಯವಹಾರ ನಿಲ್ಲಿಸಿದ್ದರು. ಸುತ್ತಮುತ್ತಲ ಜಂಕ್ಷನ್‌ಗಳಲ್ಲಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯರ ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮಗನ ನಿರೀಕ್ಷೆಯಲ್ಲಿದ್ದರು: ದಂಪತಿಯ ಮಗ ಕಿರಣ್, ಮೇ 8ರಂದು ನಗರಕ್ಕೆ ಬರುವುದಾಗಿ ಏಪ್ರಿಲ್ 11ರಂದು ತಾಯಿಗೆ ಕರೆ ಮಾಡಿ ಹೇಳಿದ್ದರು. ವರ್ಷದ ನಂತರ ಮಗ ಮನೆಗೆ ಬರುತ್ತಿರುವುದಾಗಿ ಚಂದ್ರಕಲಾ ಸ್ಥಳೀಯ ಮಹಿಳೆಯರ ಬಳಿ ಹೇಳಿಕೊಂಡಿದ್ದರು.

ಹಿಂದಿನ ಪ್ರಕರಣಗಳು
ಜುಲೈ 4, 2015: ಹೆಸರುಘಟ್ಟದ ವಿನಾಯಕ ಲೇಔಟ್‌ನಲ್ಲಿ ಕೊಪ್ಪಳ ಮೂಲದ ಬಸವರಾಜು (27) ಹಾಗೂ ಕಸ್ತೂರಿ (25) ದಂಪತಿಯ ಹತ್ಯೆ. ಪ್ರೇಮ ವಿವಾಹವಾಗಿದ್ದಕ್ಕೆ ಕಸ್ತೂರಿ ಸಂಬಂಧಿಗಳಿಂದಲೇ ಕೃತ್ಯ.

ಮೇ 3, 2014: ರಾಮಮೂರ್ತಿನಗರದ ಒಎಂಬಿಆರ್ ಲೇಔಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸಂಸ್ಥೆಯ (ಎಲ್‌ಆರ್‌ಡಿಇ) ನಿವೃತ್ತ ವಿಜ್ಞಾನಿ ಪಟ್ಟಾಭಿರಾಮನ್‌ ನಾಯ್ಡು (73) ಮತ್ತು ಇಂದಿರಾ (67) ದಂಪತಿಯ ಹತ್ಯೆ.

ಆಗಸ್ಟ್ 10, 2012: ಜೆ.ಪಿ ನಗರ ದಲ್ಲಿ ಶಿಕ್ಷಣ ಇಲಾಖೆಯ ನಿವೃತ್ತ ನೌಕರ ವೆಂಕಟೇಶಯ್ಯ (76) ಮತ್ತು ಅವರ ಪತ್ನಿ ಸ್ವರ್ಣಾಂಬ (68) ದಂಪತಿ ಕೊಲೆ. ಸಂಪ್‌ ಸ್ವಚ್ಛಗೊಳಿಸುವ ಸೋಗಿನಲ್ಲಿ ಬಂದಿದ್ದ ಗುರುಪ್ರಸಾದ್ ಎಂಬಾತನಿಂದ ಕೃತ್ಯ.

ಆಗಸ್ಟ್ 1, 2012: ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಹೋಟೆಲ್‌ ಮಾಲೀಕ ಪವನ್‌ಕುಮಾರ್ ಶರ್ಮ (45) ಮತ್ತು ಅವರ ಪತ್ನಿ ಬಬಿತಾ ದೇವಿ (40) ದಂಪತಿಯ ಕೊಲೆ. ಅವರ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಅಸ್ಸಾಂ ಮೂಲದ ಕಾರ್ತಿಕ್ ಎಂಬಾತನ ಬಂಧನ.

Write A Comment