ಕರ್ನಾಟಕ

ಬಿಳಿಗಿರಿರಂಗನ ಕಿರೀಟದಲ್ಲಿ ಸುಟ್ಟ ವಜ್ರದ ಹರಳುಗಳು

Pinterest LinkedIn Tumblr

haralu

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಉತ್ಸವ ಮೂರ್ತಿಗೆ ತೊಡಿಸುವ ವಜ್ರದ ಹರಳುಗಳುಳ್ಳ ದುಂಡುಕಿರೀಟದಲ್ಲಿನ ಕಳಶದಲ್ಲಿ ಹರಳುಗಳು ಸುಟ್ಟಿರುವುದು
ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾಗಿರುವ ಬಿಳಿಗಿರಿರಂರನಬೆಟ್ಟದ ಪೌರಾಣಿಕ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಮೂಲ ಉತ್ಸವ ಮೂರ್ತಿಗೆ ಹಾಕುವ ಚಿನ್ನದ ಗುಂಡು ಕಿರೀಟದ ಮೇಲ್ಭಾಗದಲ್ಲಿರುವ ಕಳಶದಲ್ಲಿದ್ದ ಕೆಂಪು ವಜ್ರದ 25ಕ್ಕೂ ಹೆಚ್ಚು ಹರಳುಗಳು ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ.

ಘಟನೆ ವಿವರ: ಬಿಳಿಗಿರಿರಂಗನಾಥಸ್ವಾಮಿ ನಡೆಯುವ ಚಿಕ್ಕಜಾತ್ರೆ ಹಾಗೂ ದೊಡ್ಡ ರಥೋತ್ಸವಕ್ಕೆ ಚಿನ್ನದ ಆಭರಣಗಳನ್ನು ಪಟ್ಟಣದ ಉಪಖಜಾನೆ ಕಾರ್ಯಾಲಯದಿಂದ ತೆಗೆದುಕೊಂಡು ಹೋಗುವ ವಾಡಿಕೆ ಇದೆ. ಅದರಂತೆ ಏ. 21ರಂದು ಆಭರಣಗಳನ್ನು ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಯಿತು. ಏ. 22ರಂದು ರಥೋತ್ಸವ ಮುಗಿದಿದ್ದು, ಏ. 24ರಂದು ಇದನ್ನು ವಾಪಸ್‌ ತರಲು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಆಭರಣಗಳನ್ನು ಬೆಟ್ಟಕ್ಕೆ ತಂದ ಮೇಲೆ ಹಾಗೂ ತೆಗೆದುಕೊಂಡು ಹೋಗುವ ವೇಳೆ ಸಂಬಂಧಪಟ್ಟ ಅರ್ಚಕರ ಸುಪರ್ದಿಗೆ ಇದನ್ನು ವಹಿಸಲಾಗಿದೆ. ಆದರೆ, ಉತ್ಸವ ಮೂರ್ತಿಗೆ ಧರಿಸುವ ದುಂಡು ಕಿರೀಟದ ಮೇಲ್ಭಾಗದಲ್ಲಿರುವ ಕಳಶದಲ್ಲಿ 60ಕ್ಕೂ ಹೆಚ್ಚು ಕೆಂಪು ವಜ್ರದ ಹರಳುಗಳಿದ್ದು. ಒಂದು ಭಾಗದಲ್ಲಿ 25ಕ್ಕೂ ಹೆಚ್ಚು ಹರಳುಗಳು ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ.

ಮೈಸೂರಿನ ಮಹಾರಾಜರು ಸೇರಿದಂತೆ ಅನೇಕರು ನೂರಾರು ವರ್ಷಗಳಿಂದಲೂ ಅನೇಕ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಬೆಲೆ ಕಟ್ಟಲಾಗದ ಇಂತಹ ಆಭರಣಗಳನ್ನು ಯಾರು ಹೀಗೆ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಮತ್ತೆ ಮರುಕಳಿಸಿದ ಹಳೆ ಚಾಳಿ: ಈ ಹಿಂದೆ ಬಿಳಿಗಿರಿರಂಗನಬೆಟ್ಟದಲ್ಲಿ ಅಲಮೇಲಮ್ಮನವರ ದೇವರ ತಿಲಕ ನಾಪತ್ತೆಯಾಗಿತ್ತು. ಜತೆಗೆ, ಬಿಳಿಗಿರಿರಂಗನಾಥಸ್ವಾಮಿಯ ಪಾದುಕೆ ಬದಲಾವಣೆಯಾಗಿತ್ತು. ಈ ಬಾರಿ ಕಿರೀಟದ ವಜ್ರದ ಹರಳುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇಷ್ಟಾದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಈ ಬಗ್ಗೆ ವರದಿಯನ್ನು ಬರೆದು ನುಣಚಿಕೊಳ್ಳಲು ಯತ್ನಿಸುತ್ತದೆ ವಿನಹ ಈ ಕೃತ್ಯ ಎಸೆಗಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿನ ಭಕ್ತರ ದೂರು.

ಕ್ರಮಕ್ಕೆ ಸೂಚನೆ: ತಹಶೀಲ್ದಾರ್ ಕೆ. ಚಂದ್ರಮೌಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪರಿಶೀಲನೆಯಲ್ಲಿ ಖುದ್ದು ಹಾಜರಿದ್ದೇನೆ. ಕಿರೀಟದಲ್ಲಿರುವ 25ಕ್ಕೂ ಹೆಚ್ಚು ವಜ್ರದ ಹರಳುಗಳು ಸುಟ್ಟು ಹೋಗಿವೆ. ಜತೆಗೆ, ಚಿನ್ನ ಸಹ ಸುಟ್ಟಿದೆ. ಈ ಸಂಬಂಧ ಇದರ ಉಸ್ತುವಾರಿ ವಹಿಸಿದ್ದ ಅರ್ಚಕ ಶೇಷಾದ್ರಿ ಹಾಗೂ ಆಗಮಿಕರನ್ನು ವಿಚಾರಣೆ ನಡೆಸಲಾಗಿದೆ. ಆಭರಣಗಳನ್ನು ದೇಗುಲದಲ್ಲೇ ಇರಿಸಲಾಗಿದೆ. ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತಲುಪಿಸಿ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದರು.

ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಕಾರ್ಯನಿರ್ವಹಕಾಧಿಕಾರಿ ವೆಂಕಟೇಶ್ ಪ್ರಸಾದ್, ಮಾಜಿ ಧರ್ಮದರ್ಶಿಗಳಾದ ಎನ್. ದೊರೆಸ್ವಾಮಿ, ವಿ. ಶ್ರೀರಾಮ್, ಅರ್ಚಕರಾದ ರವಿ, ನಾಗರಾಜಭಟ್ಟ, ಪೊಲೀಸ್ ಇಲಾಖೆಯ ಶ್ರೀನಿವಾಸ ನಾಯಕ ಇದ್ದರು.

Write A Comment