ಮನೋರಂಜನೆ

ಲಯನ್ಸ್‌ ಗರ್ಜನೆಗೆ ಮಣಿದ ಆರ್‌ಸಿಬಿ; ವಿರಾಟ್ ಕೊಹ್ಲಿಗೆ ನಿರಾಸೆ

Pinterest LinkedIn Tumblr

virat-kohli

ರಾಜ್‌ಕೋಟ್‌: ರನ್ ಹೊಳೆ ಹರಿದ ಆರ್‌ಸಿಬಿ ಮತ್ತು ಗುಜರಾತ್‌ ಲಯನ್ಸ್ ತಂಡಗಳ ನಡುವಣ ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸಿತು. ಆದರೆ, ಕೊನೆಯ ಓವರ್‌ನಲ್ಲಿ ಸೋಲು ಕಂಡ ಕಾರಣ ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರಿನ ತಂಡ ಭಾರಿ ನಿರಾಸೆಗೆ ಒಳಗಾಗಬೇಕಾಯಿತು.

ಹಿಂದಿನ ಪಂದ್ಯದಲ್ಲಿ ಬಲಿಷ್ಠ ರೈಸಿಂಗ್ ಪುಣೆಯನ್ನು ಸೋಲಿಸಿದ್ದ ಆರ್‌ಸಿಬಿ ವಿಶ್ವಾಸದಲ್ಲಿತ್ತು. ಆದ್ದರಿಂದ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಜಯಿಸಿದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ದೈತ್ಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿ ರುವ ಆರ್‌ಸಿಬಿ 20 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 180 ರನ್‌ ಕಲೆ ಹಾಕಿತು. ಸವಾಲಿನ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಉತ್ತಮ ರನ್‌ರೇಟ್‌ ಕಾಪಾಡಿಕೊಂಡು ಬಂದ ಸುರೇಶ್‌ ರೈನಾ ನಾಯಕತ್ವದ ಲಯನ್ಸ್‌ ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿ ಆಟಕ್ಕೆ ಖುಷಿಯೋ ಖುಷಿ: ಉತ್ತಮ ಲಯದಲ್ಲಿರುವ ವಿರಾಟ್‌ ಕೊಹ್ಲಿ ಅಬ್ಬರ ಲಯನ್ಸ್ ಎದುರಿನ ಪಂದ್ಯದಲ್ಲಿಯೂ ಮುಂದುವರಿಯಿತು.
ಹಿಂದಿನ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕಾರಣ ಕೆ.ಎಲ್. ರಾಹುಲ್ ಬದಲು ಶೇನ್‌ ವ್ಯಾಟ್ಸನ್‌ ಅವರನ್ನು ಆರಂಭಿಕ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಲಾಯಿತು.

ವೇಗದ ಆಟಕ್ಕೆ ಹೆಸರಾಗಿರುವ ಕೊಹ್ಲಿ ಮತ್ತು ವ್ಯಾಟ್ಸನ್‌ ಮೊದಲ ಓವರ್‌ನಲ್ಲಿ ನಿಧಾನವಾಗಿ ರನ್ ಕಲೆ ಹಾಕಿದರು. ಕ್ರೀಸ್‌ಗೆ ಕಚ್ಚಿಕೊಳ್ಳುವಷ್ಟ ರಲ್ಲಿಯೇ ವ್ಯಾಟ್ಸನ್‌ ಅವರು ಧವಳ್‌ ಕುಲಕರ್ಣಿ ಬೌಲಿಂಗ್‌ನಲ್ಲಿ ಔಟಾದರು. ಪುಣೆ ರೈಸಿಂಗ್ ತಂಡದ ಎದುರು 83 ರನ್ ಬಾರಿಸಿದ್ದ ಡಿವಿಲಿಯರ್ಸ್ ಇಲ್ಲಿ 20 ರನ್‌ ಗಳಿಸಿದ್ದ ವೇಳೆ ಪ್ರವೀಣ್ ತಾಂಬೆ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

16 ಎಸೆತಗಳನ್ನು ಎದುರಿಸಿದ ಡಿವಿಲಿಯರ್ಸ್‌ ಎರಡು ಬೌಂಡರಿ ಹೊಡೆದರು.ಎರಡನೇ ವಿಕೆಟ್‌ಗೆ ಇವರ ಜೊತೆಯಾಟದಲ್ಲಿ 51 ರನ್‌ಗಳು ಬಂದವು.
ಮೂರನೇ ವಿಕೆಟ್‌ಗೆ ಕೊಹ್ಲಿ ಜೊತೆ ಕರ್ನಾಟಕದ ರಾಹುಲ್‌ ಸೇರಿದ ಬಳಿಕ ಅಭಿಮಾನಿಗಳ ಖುಷಿ ಇಮ್ಮಡಿ ಗೊಂಡಿತು. ‌ಈ ಜೋಡಿ ಮುರಿಯದ ಜೊತೆಯಾಟದಲ್ಲಿ 121 ರನ್ ಕಲೆ ಹಾಕಿತು. ಇದಕ್ಕಾಗಿ ಅವರು ತೆಗೆದು ಕೊಂಡಿದ್ದು 74 ಎಸೆತಗಳಷ್ಟೇ.

ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ರನ್‌ ಹೊಳೆಯೇ ಹರಿಸಿದ್ದಾರೆ. ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ 75, ಡೆಲ್ಲಿ ವಿರುದ್ಧ 79, ಸೂಪರ್‌ಜೈಂಟ್ಸ್‌ ಎದುರು 80 ರನ್ ಬಾರಿಸಿದ್ದರು. ಇವರ ಅಮೋಘ ಬ್ಯಾಟಿಂಗ್‌ಗೆ ಗುಜರಾತ್‌ನ ಕ್ರಿಕೆಟ್‌ ಪ್ರೇಮಿಗಳು ಮನದೂಗಿದರು.

ಹಿಂದಿನ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ರಾಹುಲ್‌ ಇಲ್ಲಿ ವೇಗವಾಗಿ ರನ್ ಗಳಿಸಿದರು. 35 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು. ಐಪಿಎಲ್‌ನಲ್ಲಿ ರಾಹುಲ್ ಬಾರಿಸಿದ ಚೊಚ್ಚಲ ಅರ್ಧಶತಕ ಇದಾಗಿದೆ.

ಅನುಭವಿ ಕೊಹ್ಲಿ ಮತ್ತು ರಾಷ್ಟ್ರೀಯ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಥಾನ ಪಡೆದಿರುವ ರಾಹುಲ್‌ ಸುಂದರ ಜೊತೆಯಾಟ ಅಭಿಮಾನಿಗಳ ಸಂಭ್ರಮ ಕ್ಕೂ ಕಾರಣವಾಯಿತು. ‘ಕೊಹ್ಲಿ ನಾವು ಸಕ್ಕರೆ ಇಲ್ಲದ ಕಾಫಿ ಕುಡಿಯುತ್ತಿದ್ದೇವೆ. ಏಕೆಂದರೆ ನಿಮ್ಮ ಅಮೋಘ ಬ್ಯಾಟಿಂಗ್‌ನಿಂದ ಕಾಫಿ ಸಿಹಿಯಾಗಿದೆ’ ಎಂದು ಅಭಿಮಾನಿಗಳು ಭಿತ್ತಿಚಿತ್ರ ಪ್ರದರ್ಶಿಸಿ ಅಭಿಮಾನ ವ್ಯಕ್ತಪಡಿಸಿದರು.

ಆರಂಭದಿಂದಲೇ ಅಬ್ಬರ: ಲಯನ್ಸ್ ತಂಡ ಮೊದಲ ಓವರ್‌ನಿಂದಲೇ ವೇಗದ ಆಟಕ್ಕೆ ಒತ್ತುಕೊಟ್ಟಿತು. ‌ಡ್ವೇನ್ ಸ್ಮಿತ್‌ (32) ಮತ್ತು ಬ್ರೆಂಡನ್ ಮೆಕ್ಲಮ್ (42, 24ಎಸೆತ, 5 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್‌ಗೆ 32 ಎಸೆತಗಳಲ್ಲಿ 47 ರನ್ ಗಳಿಸಿ ಗಟ್ಟಿ ಬುನಾದಿ ನಿರ್ಮಿಸಿದರು.

ಬಳಿಕ ನಾಯಕ ಸುರೇಶ್‌ ರೈನಾ, ದಿನೇಶ್ ಕಾರ್ತಿಕ್ ಜವಾಬ್ದಾರಿಯುತವಾಗಿ ಆಡಿ ಲಯನ್ಸ್‌ ಗೆಲುವಿಗೆ ಕಾರಣರಾದರು. ಈ ಬಾರಿಯ ಐಪಿಎಲ್ ಟೂರ್ನಿಯ ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಕಾರ್ತಿಕ್‌ ಆರ್‌ಸಿಬಿ ಎದುರು ರನ್ ಹೊಳೆ ಹರಿಸಿದರು. 39 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡಂತೆ 50 ರನ್ ಗಳಿಸಿದರು. ರೈನಾ ಮತ್ತು ಕಾರ್ತಿಕ್‌ ಮೂರನೇ ವಿಕೆಟ್‌ಗೆ 53 ರನ್ ಕಲೆ ಹಾಕಿ ಆರ್‌ಸಿಬಿ ಮೇಲೆ ಒತ್ತಡ ಹೇರಿದರು.

ಕೊನೆಯ ಎರಡು ಓವರ್‌ಗಳಲ್ಲಿ ಲಯನ್ಸ್ ಜಯಕ್ಕೆ 21 ರನ್ ಅಗತ್ಯವಿತ್ತು. ಕಾರ್ತಿಕ್ ಬಾರಿಸಿದ ಎರಡು ಬೌಂಡರಿ ಪಂದ್ಯದ ತಿರುವಿಗೆ ಕಾರಣವಾಯಿತು. ಈ ಓವರ್‌ನಲ್ಲಿ ಒಟ್ಟು 14 ರನ್‌ಗಳು ಬಂದವು.

ಜಯಕ್ಕೆ ಕೊನೆಯ ಓವರ್‌ನಲ್ಲಿ ಬೇಕಿದ್ದ ಏಳು ರನ್‌ಗಳನ್ನು ಟೂರ್ನಿಯ ಹೊಸ ತಂಡ ಲಯನ್ಸ್ ಸುಲಭವಾಗಿ ಕಲೆ ಹಾಕಿತು. ಐಪಿಎಲ್‌ ಟೂರ್ನಿಯ ಹಿಂದಿನ 16 ಇನಿಂಗ್ಸ್‌ಗಳಿಂದ ಕಾರ್ತಿಕ್ ಒಂದೂ ಅರ್ಧಶತಕ ಗಳಿಸಿರಲಿಲ್ಲ. ಆದರೆ, ಅವರು ಈ ಪಂದ್ಯದಲ್ಲಿ ಅಬ್ಬರಿಸಿ ಲಯನ್ಸ್ ಪಾಲಿಗೆ ಹೀರೊ ಆದರು.

Write A Comment