ಕರ್ನಾಟಕ

ರಾಜಕಾರಣಿಗಳಿಗಿಂತ ಸಾಹಿತಿಗಳಲ್ಲಿ ರಾಜಕೀಯ ಹೆಚ್ಚಾಗಿ ಬಿಟ್ಟಿದೆ : ವೀರಪ್ಪ ಮೊಯ್ಲಿ

Pinterest LinkedIn Tumblr

5

ಬೆಂಗಳೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ಸರ್ಕಾರ ಮಾಡಬೇಕು ಎಂಬುದಕ್ಕಿಂತ ಸಾಹಿತಿಗಳು, ವಿದ್ವಾಂಸರು ಮಾಡಬೇಕು. ಇವರುಗಳಲ್ಲೂ ರಾಜಕಾರಣಿಗಳಿಗಿಂತ ರಾಜಕೀಯ ಹೆಚ್ಚಾಗಿ ಬಿಟ್ಟಿದೆ. ಹಾಗಾಗಿ ಇದು ಘೋಷಣೆಗಷ್ಟೇ ಸೀಮಿತವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ವಿಷಾದಿಸಿದರು. ಕೆಎಎಸ್ ಭವನದಲ್ಲಿಂದು ಪ್ರೊ.ಎ.ವಿ.ನಾವಡ ಅವರ ಸಂಶೋಧನಾ ಕೃತಿಗಳಾದ ಸಾಹಿತ್ಯ ಶೋಧ, ಜನಪದ ಶೋಧ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಕೇಂದ್ರ ಸಚಿವನಾಗಿದ್ದಾಗ ಕನ್ನಡ, ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಂತೆ ಮಾಡಿದ್ದೆ.

ಆನಂತರ ಏನಾಯ್ತು? ಯಾವುದೇ ಪ್ರಗತಿ ಆಗಲೇ ಇಲ್ಲ. ಈಗಲೂ ಕೂಡ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನಕ್ಕೂ ನಾನೇ ಮತ್ತೊಂದು ಸುತ್ತಿನ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಕೂಗೆದ್ದು ಹೋರಾಟ ನಡೆದಾಗ ನಾನು ಕೇಂದ್ರ ಸಚಿವನಾಗಿದ್ದೆ. ಸಂಪುಟ ಸಭೆಯೇ ನಡೆಯದೆ ಸಭೆಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಪ್ರಧಾನಿಗಳಿಗಿದೆ. ಅದನ್ನು ಬಳಕೆ ಮಾಡಿಕೊಂಡು ಸಂಸತ್‌ನಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಸಂಪುಟ ಸಭೆ ಮಾಡದೆ ಅಂದಿನ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹೇರಿದ್ದೆ ಎಂದರು.

ನಾವು ಬರೀ ಘೋಷಣೆ ವೀರರಾಗಿದ್ದೇವೆ. ಲೋಕಪಾಲ ಮಸೂದೆಗೆ ದೊಡ್ಡ ಹೋರಾಟವೇ ನಡೆಯಿತು. ನಾನು ಕಾನೂನು ಸಚಿವನಾಗಿದ್ದಾಗ ಸಂಸತ್‌ನಲ್ಲಿ ಅಂಗೀಕಾರ ಕೊಡಿಸಿದೆ. ಅದರ ಅನುಷ್ಠಾನ ಏನಾಯಿತು? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನಕ್ಕಾಗಿ ಪ್ರಾದೇಶಿಕ ಭಾಷಾ ಕೇಂದ್ರಗಳಿಗೆ ಹೊಣೆಗಾರಿಕೆ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಕನ್ನಡ ವಿವಿ ಸ್ಥಾಪನೆ ಮಾಡಿರುವುದು ಸಂಶೋಧನೆಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ. ಆದರೆ ಆ ರೀತಿ ನಡೆಯುತ್ತಿಲ್ಲ. ಅದರ ಉದ್ದೇಶವೂ ಈಡೇರಿಲ್ಲ. ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಯುಜಿಸಿ ವೇತನ ಕೊಟ್ಟು ಹೆಚ್ಚು ಆದ್ಯತೆ ನೀಡಬೇಕಿದೆ. ಆದರೆ ಇತ್ತೀಚೆಗೆ ನಾಡೋಜ ಪ್ರಶಸ್ತಿ ನೀಡುವುದು ಸೇರಿದಂತೆ ಕುಲಪತಿಗಳ ನೇಮಕ ಯಾವೊಂದೂ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಬೇಸರಪಟ್ಟರು.

ಮಣಿಪಾಲ್‌ನಲ್ಲಿ ಗೋವಿಂದಪ್ಪ ಪೈ ಅಧ್ಯಯನ ಕೇಂದ್ರವಿದೆ. ಅಲ್ಲಿ ಅಧ್ಯಯನವೇ ನಡೆಯುತ್ತಿಲ್ಲ. ಹಾಗಾಗಿ ಗೋವಿಂದ ಪೈ ಅವರು ಹುಟ್ಟಿದ ಮನೆಯನ್ನು ಅಧ್ಯಯನ ಕೇಂದ್ರವನ್ನಾಗಿ ಮಾಡುವ ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕ್ಷೇತ್ರ ಸಂಶೋಧನೆ ಮಾಡದೆ ನಾನು ಯಾವುದೇ ಕೃತಿ ಬರೆಯುವುದಿಲ್ಲ. ದ್ರೌಪದಿ ಕೃತಿಯನ್ನು ಆತ್ಮಕಥಾನಕದ ರೂಪದಲ್ಲಿ ಬರೆದೆ. ಬಾಹುಬಲಿ ಪುಸ್ತಕವನ್ನು ಮನಃಶಾಸ್ತ್ರ ಅಧ್ಯಯನ ರೂಪದಲ್ಲಿ ಬರೆಯುತ್ತಿದ್ದೇನೆ. ನಾನು ಪುಸ್ತಕಗಳಲ್ಲಿ ಹೊಸ ಪದಗಳನ್ನು ಬಳಸುತ್ತೇನೆ. ಅದಕ್ಕಾಗಿ ಬಹಳ ಅಧ್ಯಯನ ಮಾಡುತ್ತೇನೆ. ಇದನ್ನು ಬಹುತೇಕ ಮಂದಿ ಗಮನಿಸುವುದಿಲ್ಲ.

ಇಂತಹ ಪುಸ್ತಕಗಳನ್ನು ಓದುವ ಮೂಲಕ ನಮಗೆ ಪ್ರೋತ್ಸಾಹ ಮಾಡಬೇಕಿತ್ತು. ಆದರೆ ಇಂಥವುಗಳನ್ನು ಯಾರು ಓದುವುದಿಲ್ಲ. ಹಾಗಾಗಿ ನಾವು ಶಾಪಪುತ್ರರಾಗುತ್ತಿದ್ದೇವೆ. ಮಡಿವಂತಿಕೆ ಜೀವಂತವಾಗಿಟ್ಟುಕೊಂಡವರು ಸರಸ್ವತಿಪುತ್ರರಾಗುತ್ತಾರೆ. ಇದರಿಂದ ನನಗೆ ಬೇಸರವಿಲ್ಲ. ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಎಸ್.ಎಲ್.ಬೈರಪ್ಪ ಅವರನ್ನು ಕುರಿತು ಪರೋಕ್ಷವಾಗಿ ಮೊಯ್ಲಿ ವ್ಯಂಗ್ಯವಾಡಿದರು.ಜೆಎನ್‌ಯು ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕರಾವಳಿಯಲ್ಲಿ ಪಂಡಿತ ಪರಂಪರೆ ಇತ್ತು.

ಅದು ಈಗ ಅದು ಕಡಿಮೆಯಾಗಿದೆ. ಆಂಧ್ರಪ್ರದೇಶ ತಮಿಳುನಾಡಿನಲ್ಲಿ ಸಾಹಿತ್ಯಾತ್ಮಕವಾಗಿ ಸಣ್ಣ ಕಾರ್ಯಕ್ರಮ ನಡೆದರೂ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತದೆ. ನಮ್ಮಲ್ಲಿ ಭಾರೀ ಪ್ರಮಾಣದ ಬೌದ್ಧಿಕ ಸಂಪತ್ತಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣ ಶೆಟ್ಟಿ , ವಿಶ್ರಾಂತ ಕುಲಪತಿ ಇ.ಚಿ.ಬೋರಲಿಂಗಯ್ಯ, ಕಾ.ತ.ಚಿಕ್ಕಣ್ಣ , ಎ.ವಿ.ನಾವಡ, ಗಾಯತ್ರಿ ನಾವಡ ಮತ್ತಿತರರು ಪಾಲ್ಗೊಂಡಿದ್ದರು.

Write A Comment