ಕರ್ನಾಟಕ

ಪುಂಡಲೀಕ ಹಾಲಂಬಿ ನಿಧನಕ್ಕೆ ಹಲವು ಗಣ್ಯರ ಸಂತಾಪ

Pinterest LinkedIn Tumblr

pundalika

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಮೇಯರ್ ಬಿ.ಎನ್.ಮಂಜುನಾಥರೆಡ್ಡಿ, ಕನ್ನಡಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಹಾಲಂಬಿ, ಕನ್ನಡದ ಬಗ್ಗೆ ನೈಜ ಕಳಕಳಿ ಹೊಂದಿದ್ದರು. ಪುಂಡಲೀಕ ಹಾಲಂಬಿ ಅವರ ನಿಧನ ಕನ್ನಡ ನಾಡಿಗೆ ಅಪಾರ ನಷ್ಟವನ್ನುಂಟು ಮಾಡಿದೆ. ಹಾಲಂಬಿ ಅವರ ಕನ್ನಡ ಅಭಿಮಾನವನ್ನು ಕನ್ನಡಿಗರು ಸದಾ ಸ್ಮರಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ತಮ್ಮ ಸಂತಾಪ ಸೂಚಿಸಿದ್ದಾರೆ. ಹಾಲಂಬಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ತುಂಬಲಾರದ ನಷ್ಟವುಂಟಾಗಿದ್ದು, ಮೃತರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಗದೀಶ್ ಶೆಟ್ಟರ್ ಸಂತಾಪ ಸಂದೇಶ ನೀಡಿದ್ದಾರೆ.

ಕನ್ನಡದ ಗಟ್ಟ ಧ್ವನಿಯೊಂದು ಹಾಲಂಬಿ ಅವರ ನಿಧನದಿಂದ ನಿಶ್ಯಬ್ದವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ ಹಾಲಂಬಿಯವರು ಸದಾ ಕನ್ನಡದ ಪರವಾಗಿ ದನಿ ಎತ್ತುತ್ತಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಸಾ.ರಾ.ಗೋವಿಂದು ವಿಷಾದಿಸಿದ್ದಾರೆ. ಕನ್ನಡವನ್ನು ಮನೆ ಮನೆಗೆ ಕೊಂಡೊಯ್ದ ತಮ್ಮ ಅಧಿಕಾರಾವಧಿಯಲ್ಲಿ ಅಚ್ಚುಕಟ್ಟಾಗಿ ಕನ್ನಡ ಸಮ್ಮೇಳನಗಳನ್ನು ಮಾಡಿ ಎಲ್ಲರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಕನ್ನಡವನ್ನು ಬೆಳೆಸಿದವರು, ಉಳಿಸಿದವರು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗುಣಗಾನ ಮಾಡಿದರು.

ಹಾಲಂಬಿ ಅವರ ನಿಧನದಿಂದ ಕನ್ನಡ ನಾಡಿಗೆ ಹಾಗೂ ಕನ್ನಡಪರ ಹೋರಾಟಗಾರರಿಗೆ ಭಾರೀ ನಷ್ಟವುಂಟಾಗಿದೆ. ಕನ್ನಡ ನಾಡು-ನುಡಿಗಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ ಎಂದು ಮೇಯರ್ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.

Write A Comment