ಕರ್ನಾಟಕ

ಐತಿಹಾಸಿಕ ಕರಗ ಮಹೋತ್ಸವಕ್ಕೆ ಸಾಕ್ಷಿಯಾದ ಲಕ್ಷಾಂತರ ಮಂದಿ !

Pinterest LinkedIn Tumblr

Karaga22

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯುತ್ಸವ ಚೈತ್ರ ಪೂರ್ಣಿಮೆಯ ದಿನವಾದ ಶುಕ್ರವಾರ ರಾತ್ರಿ ವೈಭವಪೂರ್ಣವಾಗಿ ನಡೆಯಿತು. ಕೆ.ಆರ್.ಮಾರುಕಟ್ಟೆ ಸಮೀಪದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ತಡ ರಾತ್ರಿ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಹೂವಿನ ಕರಗ ಆರಂಭವಾಯಿತು. ಕರಗ ಹೊತ್ತಿದ್ದ ಅರ್ಚಕ ಲಕ್ಷ್ಮೀಶ ಅವರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಗೋವಿಂದ.. ಗೋವಿಂದ.. ಎಂಬ ನಾಮಸ್ಮರಣೆ, ದ್ರೌಪದಮ್ಮನನ್ನು ಒಲಿಸಿಕೊಳ್ಳಲು ಕತ್ತಿಯಿಂದ ಎದೆಗೆ ಹೊಡೆದುಕೊಳ್ಳುತ್ತಿದ್ದ ವೀರಕುಮಾರರು.. ಎಲ್ಲೆಡೆ ಮಲ್ಲಿಗೆಯ ಘಮಕ್ಕೆ ಭಕ್ತಿಯ ವಾತಾವರಣ ನಿರ್ವಣ.. ಇದು ಶುಕ್ರವಾರ ಅಹೋರಾತ್ರಿ ನಡೆದ ಐತಿಹಾಸಿಕ ಬೆಂಗಳೂರು ದ್ರೌಪದಮ್ಮ ಕರಗ ಮಹೋತ್ಸವದಲ್ಲಿ ಕಂಡುಬಂದ ದೃಶ್ಯಗಳು.

A large number of devotees gathers in front of Dharmaraya Temple during the historical Bengaluru Karaga Festival at Tigalara Pete in Bangalore on Friday night. -Photo/ Ranju P

ಹುಣ್ಣಿಮೆ ದಿನ ರಾತ್ರಿ ನಡೆಯುವ ಪ್ರಸಿದ್ಧ ಹೂವಿನ ಕರಗ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಮಧ್ಯರಾತ್ರಿ 12.45ಕ್ಕೆ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭವಾದ ಕರಗ ಮೆರವಣಿಗೆ ನೆರೆದಿದ್ದವರನ್ನು ಭಕ್ತಿಪರವಶರನ್ನಾಗಿಸಿತು. ನಗರದ ಬೀದಿಗಳು ವಿದ್ಯುತ್ ದೀಪಗಳಿಂದ, ಹೂವು, ಬಾಳೆ ಕಂದಿನಿಂದ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದ್ದವು.

ಗೋವಿಂದನ ನಾಮಸ್ಮರಣೆ, ಹೂವಿನ ಕರಗ ಹೊತ್ತ ಅರ್ಚಕ ಲಕ್ಷ್ಮೀಶರ ಗತ್ತು-ಗೈರತ್ತುಗಳಿಂದ ಐತಿಹಾಸಿಕ ಮಹೋತ್ಸವಕ್ಕೆ ಹೊಸ ಮೆರಗು ಬಂದಂತಾಗಿತ್ತು.

ಕರಗ ಮಹೋತ್ಸವಕ್ಕೂ ಮುನ್ನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಪ್ರತೀತಿಯಂತೆ ವಿವಿಧ ಧಾರ್ವಿುಕ ವಿಧಿ ವಿಧಾನಗಳು ನಡೆದವು. ಕರಗದ ಕುಂಟೆ, ಶಕ್ತಿ ಪೀಠಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯರಾತ್ರಿ ಬೆಳದಿಂಗಳಲ್ಲಿ ಆರಂಭವಾದ ಕರಗವನ್ನು ಸರ್ವಾಲಂಕಾರ ಭೂಷಿತರಾಗಿದ್ದ ಅರ್ಚಕ ಲಕ್ಷ್ಮೀಶ ಅವರು ಹೊತ್ತು ಧರ್ಮರಾಯ ಸ್ವಾಮಿ ದೇವಾಲಯದಿಂದ ಹೊರಬರುತ್ತಿದ್ದಂತೆ ತಮಟೆ, ಮಂಗಳವಾದ್ಯಗಳು ಮೊಳಗಿದವು. ವೀರಕುಮಾರರು ದ್ರೌಪದಮ್ಮನಿಗೆ ಬೆಂಗಾವಲಾಗಿದ್ದಾರೆಯೋ ಎನ್ನುವಂತೆ ಖಡ್ಗವನ್ನು ಕೈಯಲ್ಲಿ ಹಿಡಿದು ಕರಗದೊಂದಿಗೆ ಹೆಜ್ಜೆ ಹಾಕಿದರು. ಅಲ್ಲದೆ, ಅಮ್ಮನನ್ನು ಒಲಿಸಿಕೊಳ್ಳಲು ಖಡ್ಗದಿಂದ ಎದೆಗೆ ಬಡಿದುಕೊಳ್ಳುತ್ತಿದ್ದರು.

ಕೇರಳದ ಕೊಲ್ಲಂನಲ್ಲಿ ನಡೆದ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಪಟಾಕಿರಹಿತವಾಗಿ ಬೆಂಗಳೂರು ಕರಗ ಮಹೋತ್ಸವ ಆಚರಿಸಲಾಯಿತು.

ಭಾವೈಕ್ಯತೆಯ ಸಂಕೇತ

ಬೆಂಗಳೂರು ಕರಗ ಮಹೋತ್ಸವವು ಕೋಮು ಸೌಹಾರ್ದಕ್ಕೂ ಸಾಕ್ಷಿಯಾಗುವಂತಿತ್ತು. ಪ್ರತೀತಿಯಂತೆ ಮಸ್ತಾನ್​ಸಾಬ್ ದರ್ಗಾಕ್ಕೆ ಭೇಟಿ ನೀಡಿದ ಕರಗ, ಅಲ್ಲಿ ಧೂಪದಾರತಿ ಮಾಡಲಾಯಿತು.

ರಾತ್ರಿಯಿಡೀ ಸಂಚಾರ

ಕರಗವನ್ನು ಹೊತ್ತ ಅರ್ಚಕ ಲಕ್ಷ್ಮೀಶ ಮಧ್ಯರಾತ್ರಿ 12ರಿಂದ ಮುಂಜಾನೆವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಕರಗವು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ, ರಾಣಾಸಿಂಗ್​ಪೇಟೆ ರಸ್ತೆ, ಕಾಟನ್​ಪೇಟೆ, ಬಳೆಪೇಟೆ, ಅಣ್ಣಮ್ಮ ದೇವಸ್ಥಾನ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಕುಂಬಾರಪೇಟೆ, ಕಬ್ಬನ್​ಪೇಟೆ ಮಾರ್ಗವಾಗಿ ತಿಗಳರಪೇಟೆಗೆ ಬಂದು ಸೇರಿತ್ತು. ನಂತರ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರುವ ಮೂಲಕ ಕರಗ ಮೆರವಣಿಗೆಗೆ ತೆರೆ ಎಳೆಯಲಾಯಿತು.

ಆಕರ್ಷಣೀಯ ಮತ್ತು ಭಕ್ತಿಭಾವದಿಂದ ಕೂಡಿರುವ ಕರಗ ಮಹೋತ್ಸವಕ್ಕೆ ಎಂದಿನಂತೆ ಈ ಬಾರಿಯೂ ಜನಸಾಗರವೇ ಸೇರಿತ್ತು. ಹಾಗಾಗಿ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದಲ್ಲದೆ, ಲಕ್ಷಾಂತರ ಜನರು ಸೇರಿದ್ದರಿಂದ ಮಹೋತ್ಸವದ ಮೆರಗು ಮತ್ತಷ್ಟು ಹೆಚ್ಚಾಗಿತ್ತು. ಕರಗ ಸಂಚರಿಸಿದ ಮಾರ್ಗದಲ್ಲಿ ಜನರು ಕಟ್ಟಡಗಳ ಮಹಡಿ ಮೇಲೆ ನಿಂತು ವೀಕ್ಷಿಸುತ್ತಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಜನರು ಕರಗದ ವೈಭವ ಕಣ್ತುಂಬಿಕೊಂಡರು.

Write A Comment