ಕರ್ನಾಟಕ

ಬೇಕು ರಾಜ್ಯಕ್ಕೆ ವಿಶೇಷ ಪ್ಯಾಕೇಜ್

Pinterest LinkedIn Tumblr

Baraಮುಖಪುಟ ರಾಜ್ಯ ಬೇಕು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ಬೆಂಗಳೂರು, ಏ. ೨೨- ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿಗೆ ತುತ್ತಾಗಿರುವ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ಇಂದಿಲ್ಲಿ ತಿಳಿಸಿದರು.
ರಾಜ್ಯದಲ್ಲಿನ ಭೀಕರ ಪರಿಸ್ಥಿತಿ ಅಧ್ಯಯನ ನಡೆಸಲು ಸಚಿವರ ನೇತೃತ್ವದಲ್ಲಿ ನಾಲ್ಕು ಸಚಿವ ಸಂಪುಟದ ಉಪಸಮಿತಿಗಳನ್ನು ವಿಭಾಗವಾರು ನೇಮಿಸಲಾಗಿದೆ. ಈ ಸಮಿತಿಗಳು ಈ ತಿಂಗಳ ಅಂತ್ಯಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಚನೆ ನೀಡಿದ್ದಾರೆ. ಆ ವರದಿಗಳನ್ನಾಧರಿಸಿ ಬರ ಪರಿಸ್ಥಿತಿಯಿಂದಾಗಿರುವ ನಷ್ಟ ಪ್ರಮಾಣ, ನಮಗೆ ಬೇಕಾದ ನೆರವಿನ ಪ್ರಮಾಣ ಸೇರಿದಂತೆ ಸಮಗ್ರ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ವಿಶೇಷ ಪ್ಯಾಕೇಜ್‌ಗಾಗಿ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಾನು ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೆಹಲಿಗೆ ತೆರಳುತ್ತಿದ್ದೇವೆ. ಭಾನುವಾರ ದೆಹಲಿಯಲ್ಲಿ ನಡೆಯಲಿರುವ ಮುಖ್ಯ ನ್ಯಾಯಾಧೀಶರು ಹಾಗೂ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಭಾಗವಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಹಾಗೂ ಇತರೆ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.
ಉಪಸಮಿತಿಗಳು ನೀಡುವ ವರದಿಯನ್ನಾಧರಿಸಿ ಸಮಗ್ರವಾದಂತಹ ಪ್ರಸ್ತಾವನೆಯೊಂದಿಗೆ ಕೇಂದ್ರಕ್ಕೆ ನಿಯೋಗದಲ್ಲಿ ತೆರಳಿ ಹೆಚ್ಚಿನ ನೆರವು ಕೋರಿ ಪರಿಷ್ಕೃತ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ 137 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ತಾಲ್ಲೂಕುಗಳಲ್ಲಿ 1500 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಹೆಚ್ಚಿನ ನೆರವು ಬಿಡುಗಡೆ ಮಾಡುವಂತೆ ಕೋರಲಾಗಿದೆ. ಬರ ನಿರ್ವಹಣೆಗಾಗಿ ಕೇಂದ್ರದಿಂದ ಬಂದ 1540 ಕೋಟಿ ರೂ. ಜತೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ನೆರವು ನೀಡಿ ಇದುವರೆಗೂ 2079 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮುಂಗಾರು ಹಂಗಾಮು ವೈಫಲ್ಯದಿಂದಾಗಿ 3500 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಹಿಂಗಾರು ಹಂಗಾಮು ಕೈಕೊಟ್ಟಿದ್ದರಿಂದ ಸುಮಾರು 6733 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ನಿಯಮಗಳನ್ವಯ ನಮಗೆ 1716 ಕೋಟಿ ರೂ. ಬರಬೇಕಾಗಿದೆ. ಇದನ್ನು ತಕ್ಷಣ ಬಿಡುಗಡೆ ಮಾಡುವಂತೆ ಮಾರ್ಚ್ ತಿಂಗಳಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆ ಹಾಗೂ ತಹಶೀಲ್ದಾರ್‌ಗಳು ಪರಸ್ಪರ ಸಮಾಲೋಚನೆ ಮುಖಾಂತರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ತಮ್ಮ ನೇತೃತ್ವದ ಸಮಿತಿ ನಿನ್ನೆ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆದ್ಯತೆ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Write A Comment