ಕರ್ನಾಟಕ

ಜಲಮಂಡಳಿ ಬದಲು ಖಾಸಗಿಯವರಿಗೆ ಭೂಮಿ

Pinterest LinkedIn Tumblr

kereಬೆಂಗಳೂರು, ಏ. ೨೨- ಬೆಳ್ಳಂದೂರು ಕೆರೆ ಬಳಿ ಬೆಂಗಳೂರು ಜಲಮಂಡಳಿಗೆ ಕೊಳಚಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಜಮೀನು ನೀಡದೆ ಖಾಸಗಿಯವರಿಗೆ ಜಮೀನು ನೀಡಿರುವುದಕ್ಕೆ ತನಿಖೆ ನಡೆಸಿ ವರದಿ ನೀಡುವಂತೆ ಕೆರೆ ಒತ್ತುವರಿ ಸಮಿತಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದೆ.
ಕೆರೆ ಒತ್ತುವರಿ ಸ್ಥಳ ಪರಿಶೀಲನೆಗೆ ತೆರಳುವ ಮುನ್ನ ಶಾಸಕರ ಭವನದ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ವಿಧಾನಸಭೆಯ ಕೆರೆ ಒತ್ತುವರಿ ಪತ್ತೆ ಸಮಿತಿಯ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಬೆಳ್ಳಂದೂರು ಕೆರೆ ಪ್ರದೇಶದಲ್ಲಿ ಬೆಂಗಳೂರು ಜಲ ಮಂಡಳಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ 2004ರಲ್ಲೇ ಪತ್ರ ಬರೆದು ಜಾಗ ನೀಡುವಂತೆ ಕೆಇಎಡಿಬಿಗೆ ಕೇಳಿದ್ದರು. ಭೂಸ್ವಾಧೀನಪಡಿಸಿಕೊಂಡು ಜಲಮಂಡಳಿಗೆ ಜಾಗ ನೀಡದೆ ಖಾಸಗಿ ಕೈಗಾರಿಕೋದ್ಯಮಿಗಳಿಗೆ ಜಾಗ ನೀಡಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಭೆಯಲ್ಲಿದ್ದ ನಗರಾಭಿವೃದ್ಧಿ ಇಲಾಖೆ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಸೂಚಿಸಿದರು.
ಈ ಬಗ್ಗೆ ತಮ್ಮಲ್ಲಿ ದೂರು ಬಂದಿದೆ. ಕೆಇಎಡಿಬಿ ಅಧಿಕಾರಿಗಳು ಎಸ್‌ಟಿಪಿಗೆ ಜಾಗ ನೀಡದೆ ಖಾಸಗಿ ಕೈಗಾರಿಕೋದ್ಯಮಿಗಳಿಗೆ ಜಾಗ ನೀಡಿರುವ ನಿರ್ಧಾರ ಅರ್ಥವಾಗುತ್ತಿಲ್ಲ ಎಂದು ಸಭೆಯಲ್ಲಿದ್ದ ಕೆಇಎಡಿಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಅವ್ಯವಹಾರದ ಬಗ್ಗೆಯೂ ಸಮಗ್ರ ವರದಿ ನೀಡುವಂತೆ ಸೂಚಿಸಿದರು.
ಕೆರೆ ಭೇಟಿ
ಕೆರೆ ಒತ್ತುವರಿ ಸಮಿತಿ ಇಂದು ಸ್ಯಾಂಕಿ ಕೆರೆ, ಕಾಚರಕನಹಳ್ಳಿ ಕೆರೆ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಅಮಾನಿ ಕೆರೆಗಳಿಗೆ ಭೇಟಿ ನೀಡುವ ತೀರ್ಮಾನ ತೆಗೆದುಕೊಂಡಿದೆ. ಸುಮಾರು 200 ಜನ ಸರ್ವೇಯರ್‌ಗಳನ್ನು ಬಳಸಿ ಕೆರೆ ವಿಸ್ತೀರ್ಣ, ಒತ್ತುವರಿ ಎಲ್ಲದರ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎಂದರು.
ಕಾಚರಕನಹಳ್ಳಿ ಕೆರೆಯಲ್ಲಿ ಒತ್ತುವರಿಯ ವಿರಾಟ ಸ್ವರೂಪವೇ ಬೆಳಕಿಗೆ ಬಂದಿದ್ದು, ಇಲ್ಲಿ 5 ಎಕರೆ ಒತ್ತುವರಿ ಮಾಡಿಕೊಂಡ ಇಸ್ಕಾನ್ ಸಂಸ್ಥೆ ದೇವಾಲಯ, ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದೆ. ಕಾಚರಕನಹಳ್ಳಿ ಕೆರೆ ಒಟ್ಟು 57 ಎಕರೆ 26 ಗುಂಟೆ ಒತ್ತುವರಿ ಪ್ರದೇಶದಲ್ಲಿ ಬಹುಪಾಲು ಒತ್ತುವರಿಯಾಗಿದ್ದು, ಬಿಡಿಎ ಸಹ 15 ಎಕರೆ ಒತ್ತುವರಿ ಮಾಡಿದೆ. ಸರ್ಕಾರಿ ಶಾಲೆ, ಅಂಗನವಾಡಿ ಎಲ್ಲವೂ ಒತ್ತುವರಿ ಜಾಗದಲ್ಲೇ ಇರುವುದು ಪತ್ತೆಯಾಗಿದೆ ಜೊತೆಗೆ ಚಂದ್ರಿಕಾ ಸೋಪ್ ಫ್ಯಾಕ್ಟರಿ ಸಹ 1 ಎಕರೆ 37 ಗುಂಟೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ ಎಂದರು.
ಒತ್ತುವರಿದಾರರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದ್ದು, 30 ಒತ್ತುವರಿದಾರರ ಪೈಕಿ 21 ಮಂದಿ ನೋಟೀಸ್‌ಗೆ ಉತ್ತರ ನೀಡಿದ್ದಾರೆ ಎಂದರು.
ಸ್ಯಾಂಕಿ ಕೆರೆಯಲ್ಲೂ ಸುಮಾರು 5 ಎಕರೆ ಒತ್ತುವರಿಯಾಗಿದ್ದು, ಒತ್ತುವರಿ ಜಾಗದಲ್ಲಿ ಅರಣ್ಯ ಇಲಾಖೆ ರಸ್ತೆ ನಿರ್ಮಾಣ ಮಾಡಿದೆ. ಬಿಬಿಎಂಪಿ ಈಜುಕೊಳ, ಶಿವಾಜಿ ಪ್ರತಿಮೆ ನಿರ್ಮಿಸಿದೆ. ಖಾಸಗಿ ಒತ್ತುವರಿದಾರರ ವಿವಾದ ನ್ಯಾಯಾಲಯದಲ್ಲಿದೆ ಎಂದರು.
ಸಿಂಗನಾಯಕನಹಳ್ಳಿ, ಆವಲಹಳ್ಳಿ ಕೆರೆಯ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಇಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ನಿವೇಶನ, ಶಾಲೆಗಳನ್ನು ನಿರ್ಮಿಸಲಾಗಿತ್ತು ಎಂದರು.
ಸಿಂಗನಾಯಕನಹಳ್ಳಿ, ಅಮಾನಿ ಕೆರೆಯಲ್ಲೂ ಒತ್ತುವರಿಯಾಗಿದ್ದ ಬಹುತೇಕ ಕೃಷಿ ಒತ್ತುವರಿಯಾಗಿದೆ. ಶೇ. 20ರಷ್ಟು ತೆರವುಗೊಳಿಸಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಯಲಹಂಕ ತಹಸೀಲ್ದಾರ್ ಮಾಹಿತಿ ನೀಡಿದರು.
ಬೆಳ್ಳಂದೂರು ಕೆರೆ 900 ಎಕರೆ ವಿಸ್ತೀರ್ಣವಿದ್ದು. ಸುಮಾರು 25ಕ್ಕೂ ಹೆಚ್ಚು ಎಕರೆ ಒತ್ತವರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆರೆ ಒತ್ತುವರಿ ಸಮಿತಿ ಸದಸ್ಯರು ಹಾಗೂ ಶಾಸಕರಾದ ಎನ್.ಎ. ಹ್ಯಾರೀಸ್, ಗೋಪಾಲಯ್ಯ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್, ಬಿಡಿಎ ಆಯುಕ್ತ ಶ್ಯಾಂ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ವಾಸಂತಿ ಅಮರ್ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ತಹಸೀಲ್ದಾರ್‌ಗಳು ಉಪಸ್ಥಿತರಿದ್ದರು.

Write A Comment