ಕರ್ನಾಟಕ

ಅತಿಥಿ ಉಪನ್ಯಾಸಕರಿಗೆ ನೇಮಕಾತಿಯಲ್ಲಿ ರಿಯಾಯ್ತಿ : ವಯೋಮಿತಿ ಷರತ್ತು ಸಡಿಲ

Pinterest LinkedIn Tumblr

lectureಬೆಂಗಳೂರು, ಏ. ೨೨- ಪದವಿ ಕಾಲೇಜುಗಳಲ್ಲಿನ ಉಪನ್ಯಾಸಕರ ಕೊರತೆ ನೀಗಿಸಲು ಮುಂಬರುವ ದಿನಗಳಲ್ಲಿ ಸೃಷ್ಟಿಯಾಗಲಿರುವ ಸುಮಾರು ಒಂದೂವರೆ ಸಾವಿರ ಸಹ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೆ ವಯೋಮಿತಿ ರಿಯಾಯ್ತಿ ನೀಡಿ ಆದ್ಯತೆ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಇಂದಿಲ್ಲಿ ತಿಳಿಸಿದರು.
ಪ್ರಸ್ತುತ 2160 ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ತಿಂಗಳ ಅಂತ್ಯಕ್ಕೆ ಅದು ಪೂರ್ಣಗೊಳ್ಳಲಿದೆ. ಇಷ್ಟಾದ ಬಳಿಕವೂ 468 ಸಹ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇರುತ್ತವೆ. ಕಾಲೇಜುಗಳ ಸಂಖ್ಯೆಗೆ ಅನುಗುಣವಾಗಿ ಸಹ ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿ ಮಾಡಬೇಕಾಗಿದೆ. ಸುಮಾರು 1 ರಿಂದ ಒಂದೂವರೆ ಸಾವಿರ ಹುದ್ದೆಗಳು ಸೃಷ್ಟಿಯಾಗಲಿವೆ. ಆ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಿಗೂ ಆದ್ಯತೆ ನೀಡಿ ನೇಮಕ ಮಾಡಿಕೊಳ್ಳಲಾಗುವುದು ಎಂದರು
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ 14 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಕೆಲವರು 10-15 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ನೆಟ್, ಸ್ಲೆಟ್ ಹಾಗೂ ಪಿಎಚ್‌ಡಿ ಮಾಡಿರುವವರೂ ಇದ್ದಾರೆ. ಈ ಪೈಕಿ ಕೆಲವರು ವಯೋಮಿತಿ ದಾಟಿದ್ದಾರೆ. ಅಂತವರಿಗೆ ವಿಶೇಷ ರಿಯಾಯ್ತಿ ನೀಡಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.
14 ಸಾವಿರ ಅತಿಥಿ ಉಪನ್ಯಾಸಕರ ಪೈಕಿ 2600 ಮಂದಿ ನೆಟ್, ಸ್ಲೆಟ್ ಮತ್ತು ಪಿಎಚ್‌ಡಿ ಮಾಡಿರುವವರಿದ್ದಾರೆ. ಅವರಿಗೆ ವಯಸ್ಸಿನ ರಿಯಾಯ್ತಿ ನೀಡಿ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಏಕರೂಪ ನಿಯಮ
ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಗೆ ಕಾಯ್ದೆ ಇದೆಯಾದರೂ, ಒಂದೊಂದು ವಿಶ್ವವಿದ್ಯಾಲಯವೂ ತಮ್ಮದೆ ಆದ ನಿಯಮಗಳನ್ನು ರೂಪಿಸಿಕೊಂಡಿವೆ. ಇವುಗಳನ್ನು ಬದಲು ಮಾಡಿ ಎಲ್ಲ ವಿಶ್ವವಿದ್ಯಾಲಯಗಳಿಗೂ ಏಕರೂಪದ ನಿಯಮಾವಳಿಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದರು.
ಖಾಸಗಿ ವಿಶ್ವವಿದ್ಯಾಲಯಗಳಿಗೂ ಏಕರೂಪದ ನಿಯಮಾವಳಿ ರೂಪಿಸುವ ಅಗತ್ಯವಿದೆ. ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಮತ್ತು ಸಂಶೋಧನಾ ಇಲಾಖೆಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸೇರಿ ಒಟ್ಟು 50 ವಿಶ್ವವಿದ್ಯಾಲಯಗಳಿವೆ. ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಇಂದಿನ ಅಗತ್ಯತೆಗಳಿಗೆ ತಕ್ಕಂತೆ ಕೋರ್ಸ್‌ಗಳನ್ನು ಪ್ರಾರಂಭಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕಾಗಿದೆ ಎಂದರು.
ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಇದರಲ್ಲಿ ಸದಸ್ಯರಾಗಿದ್ದಾರೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು, ಶಿಸ್ತು ಕಾಯ್ದುಕೊಳ್ಳಲು ಆದ್ಯತೆ ನೀಡುವುದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಅಗತ್ಯ ಭೂಮಿಕೆ ಸಿದ್ಧಪಡಿಸುವುದು ಮುಂತಾದ ವಿಚಾರಗಳ ಬಗ್ಗೆ ಚಿಂತನೆ ನಡೆಸುವಂತೆ ಸದಸ್ಯರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕೆ ಬರುವವರ ವಿದ್ಯಾರ್ಥಿಗಳ ಸಂಖ್ಯೆ ಶೇ. 24 ರಷ್ಟಿದೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಶಯದಂತೆ 20:20 ಕ್ಕೆ ಈ ಪ್ರಮಾಣ ಶೇ. 50 ರಷ್ಟಾಗಬೇಕಾಗಿದೆ. ಆ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಉನ್ನತ ಶಿಕ್ಷಣ ಪರಿಷತ್‌ಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. 5 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ ಎಂದರು.

Write A Comment