ಕರ್ನಾಟಕ

ಸರ್ಕಾರದ ಬ್ರಹ್ಮಾಸ್ತ್ರ : ಡಿ ನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ಸುಪ್ರೀಂಗೆ ಮೇಲ್ಮನವಿ

Pinterest LinkedIn Tumblr

BSYಬೆಂಗಳೂರು, ಏ. ೨೨- ಡಿ ನೋಟಿಫಿಕೇಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಹದಿನೈದು ಪ್ರಕರಣಗಳ ವಿಚಾರಣೆಗೆ ತಡೆ ನೀಡಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತು.
ಈ ಪ್ರಕರಣಗಳ ವಿಚಾರಣೆಗೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಮೇಲ್ಮನವಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ.
ರಾಜ್ಯ ಸರಕಾರದ ಪರವಾಗಿ ಸರಕಾರಿ ವಕೀಲ ಜೋಸೆಫ್ ಅರಿಸ್ಟಾಟಲ್ ಅವರು ಮೇಲ್ಮನವಿಯನ್ನು ಸಲ್ಲಿಸಿದರು.
ದೋಷಪೂರಿತ ತೀರ್ಪು
ಡಿ ನೋಟಿಫಿಕೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು `ದೋಷಪೂರಿತ’ ಆಗಿರುವುದರಿಂದ ಈ ಆದೇಶವನ್ನು ರದ್ದುಪಡಿಸುವಂತೆಯೂ ರಾಜ್ಯಸರಕಾರದ ಪರವಾಗಿ ಸಲ್ಲಿಸಲಾಗಿರುವ ಮೇಲ್ಮನವಿಯಲ್ಲಿ ಅರಿಕೆಯನ್ನು ಮಾಡಿಕೊಳ್ಳಲಾಗಿದೆ.
ಲೋಕಾಯುಕ್ತರಿಗೆ ಅಧಿಕಾರವಿದೆ
ಡಿ ನೋಟಿಫಿಕೇಷನ್ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ವಿಷಯದಲ್ಲಿ ರಾಜ್ಯ ಹೈಕೋರ್ಟ್ ವ್ಯಕ್ತಪಡಿಸಿರುವ ಅನಿಸಿಕೆಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿರುವ ರಾಜ್ಯಸರಕಾರವು, ಈ ಸಂಬಂಧ ವಿಚಾರಣೆ ನಡೆಸುವುದಕ್ಕೆ ಲೋಕಾಯುಕ್ತರಿಗೆ ಸಕಲ ಅಧಿಕಾರ ಇದೆ ಎಂಬುದಾಗಿ ವಾದ ಮಾಡಿದೆ.
ಇದಲ್ಲದೆ ಇದೇ ಹಗರಣಗಳಿಗೆ ಸಂಬಂಧಿಸಿದಂತೆ ಮಹಾ ಲೆಕ್ಕಪರಿಶೋಧಕರು ಸಲ್ಲಿಸಿರುವ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಕೂಡ ರಾಜ್ಯ ಸರಕಾರದ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಎಸ್‌ವೈ ಪ್ರಶ್ನಿಸಿಲ್ಲ
ಲೋಕಾಯುಕ್ತರ ವಿಚಾರಣೆಗೆ ಸಂಬಂಧಿಸಿದಂತೆ ಬಿ.ಎಸ್. ಯಡಿಯೂರಪ್ಪನವರು, ಪ್ರಾಥಮಿಕ ಹಂತದಲ್ಲಿ ಅಂಥ ಕ್ರಮವನ್ನು ಪ್ರಶ್ನಿಸಿಲ್ಲ ಎಂಬ ಸಂಗತಿಯನ್ನು ಕೂಡ ಮೇಲ್ಮನವಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಸಿಎಜಿ ವರದಿಯನ್ನು ಆಧರಿಸಿಯೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಹೂಡಲಾಗಿದೆ ಎಂದೂ ಮೇಲ್ಮನವಿಯಲ್ಲಿ ಗಮನಕ್ಕೆ ತರಲಾಗಿದೆ.

ತಮ್ಮ ವಿರುದ್ಧ ಹೂಡಲಾಗಿದ್ದ ಪ್ರಕರಣಗಳ ವಿಚಾರಣೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡ ಅದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯು ಪ್ರತೀಕಾರದ ಕ್ರಮವಲ್ಲದೆ ಬೇರೇನೂ ಅಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ.
ಗಣಿಗಾರಿಕೆಗೆ ಅವಕಾಶ ನೀಡಿ ರಾಜ್ಯದ ಬೊಕ್ಕಸಕ್ಕೆ 23 ಕೋಟಿ ನಷ್ಟ ಉಂಟು ಮಾಡಿರುವ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ವಿರುದ್ಧ ಏಕೆ ಪ್ರಕರಣ ಹೂಡಿಲ್ಲ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.

Write A Comment