ಕರ್ನಾಟಕ

ಕಾಂಗ್ರೆಸ್ ಕುತಂತ್ರ ಅಂಬೇಡ್ಕರ್ ಮತಾಂತರಕ್ಕೆ ಕಾರಣ; ದೇವೇಗೌಡ

Pinterest LinkedIn Tumblr

deಬೆಂಗಳೂರು, ಏ. ೧೪ – ಕಾಂಗ್ರೆಸ್ ಪಕ್ಷದ ಕುತಂತ್ರ ಮತ್ತು ಅವಮಾನದಿಂದಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತಾಂತರಗೊಳ್ಳುವಂತಾಯಿತು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಹೇಳಿದ್ದಾರೆ.

ಅಂಬೇಡ್ಕರ್ ಅವರು 2 ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದಾಗಲೂ ಕಾಂಗ್ರೆಸ್ ಪಕ್ಷ ಕುತಂತ್ರ ಮಾಡಿ ಅವರನ್ನು ಸೋಲಿಸಿತು. ಇದರಿಂದ ಅವರು ಜೀವನದಲ್ಲಿ ಜುಗುಪ್ಸೆ ಹೊಂದಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವಂತಾಯಿತು ಎಂದು ಹೇಳಿದರು.

ಜೆಡಿಎಸ್ ಪಕ್ಷದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲಸ ಕಾರ್ಯಗಳನ್ನು ಗುರುತಿಸಲು ಹಾಗೂ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ಸೇತರ ಪ್ರಧಾನಿಯೇ ಬರಬೇಕಾಯಿತು. ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಇಂತಹ ಕೆಲಸ ಆಯಿತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹಾಗೂ ಬಾಬು ಜಗಜೀವನರಾಂ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎನ್ನುವ ಕೊರಗು ಇದೆ. ತುಳಿತಕ್ಕೊಳಗಾದ ಹಾಗೂ ಶೋಷಿತ ಸಮುದಾಯಗಳಿಗೆ ಈ ಇಬ್ಬರು ನಾಯಕರು ಸ್ಥಾನಮಾನ ಕಲ್ಪಿಸಿದವರು ಎಂದು ಗುಣಗಾನ ಮಾಡಿದರು.

ಬಾಬು ಜಗಜೀವನರಾಂರವರಂತಹ ನುರಿತ ಪ್ರಬುದ್ಧ ರಾಜಕಾರಣಿಯನ್ನು ನೋಡಿಲ್ಲ. ಅವರು ರಕ್ಷಣಾ ಸಚಿವರಾಗಿದ್ದಾಗ ಬಾಂಗ್ಲಾದೇಶದ ಮೇಲೆ ನಡೆದ ಯುದ್ಧವನ್ನು ಗೆದ್ದಿದ್ದರು. ಆದರೆ, ಅದರ ಸಂಪೂರ್ಣ ಶ್ರೇಯಸ್ಸು ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರಿಗೆ ಸಲ್ಲಿತು. ಅವರ ಪಕ್ಕದಲ್ಲೇ ಜಗಜೀವನರಾಂ ಅವರು ಇದ್ದರೂ ಅವರನ್ನು ನೆನೆಯುವ ಕೆಲಸ ಯಾರೂ ಮಾಡಲಿಲ್ಲ ಎಂದರು.

ಎಲ್ಲಾ ಪಕ್ಷಗಳಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಅವರೊಬ್ಬ ವಿಶ್ವಮಾನವ, ತುಳಿತಕ್ಕೊಳಗಾದ ಜನರನ್ನು ಮೇಲೆತ್ತಲು ಶ್ರಮಿಸಿದವರು, ಮುಂದಿನ ದಿನಾಚರಣೆಯನ್ನು ಪಕ್ಷದ ಹೊಸ ಕಚೇರಿಯಲ್ಲೇ ಆಚರಿಸಲಾಗುವುದು ಎಂದು ಹೇಳಿದರು.

ಪಕ್ಷದ ಕೆಲವು ಶಾಸಕರಿಗೆ ಖುದ್ದಾಗಿ ದೂರವಾಣಿ ಕರೆ ಮಾಡಿದ್ದರೂ ಅವರು ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರೇ ಏನೇ ಮಾಡಿದರೂ ದೇವೇಗೌಡ ಧೃತಿಗೆಡುವುದಿಲ್ಲ, ತಾನು ಏನು ಎನ್ನುವುದನ್ನು ನಿರೂಪಿಸುತ್ತೇನೆ ಎಂದರು.

ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ. ಅನ್ನದಾನಿ ಮಾತನಾ‌ಡಿ, ಸಮಾಜದ ಕಟ್ಟಕ‌ಡೆಯ ಮನುಷ್ಯರಿಗೂ ಮೀಸಲಾತಿ ಸಿಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದನ್ನು ಕಾರ್ಯರೂಪಕ್ಕೆ ತಂದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು. ಪಕ್ಷದ ದಲಿತ ಮುಖಂಡರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಗೋಪಾಲಯ್ಯ ಮಾತನಾ‌ಡಿ, ಅಂಬೇಡ್ಕರ್ ಒಂದು ವರ್ಗಕ್ಕೆ ಸೇರಿದ ನಾಯಕರಲ್ಲ, ಇಡೀ ಸಮುದಾಯಕ್ಕೆ ಸೇರಿದವರು. ಅವರು ಕೊಟ್ಟ ಸಂವಿಧಾನ ಶ್ರೇಷ್ಠ ಸಂವಿಧಾನ ಎಂದು ಹೇಳಿದರು.

ಪಕ್ಷದ ಕಾರ್ಯಾಧ್ಯಕ್ಷ ನಾರಾಯಣ ರಾವ್, ಪಾಲಿಕೆ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Write A Comment