ಕರ್ನಾಟಕ

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮುಂದಿವೆ ಬೆಟ್ಟದಷ್ಟು ಸವಾಲುಗಳು..?

Pinterest LinkedIn Tumblr

yaddiಬೆಂಗಳೂರು, ಏ.10-ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಇದೀಗ ಬೆಟ್ಟದಷ್ಟು ಸವಾಲುಗಳು ಎದುರಾಗಿವೆ. ಈ ಹಿಂದೆ ಮೂರು ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ವೇಳೆಗೂ ಈಗಿನ ಸಮಯಕ್ಕೂ ಸಾಕಷ್ಟು ಅಜಾಗಜಾಂತರ ವ್ಯತ್ಯಾಸವಿದೆ. ಇದನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಮೊದಲೇ ಬಿಎಸ್‌ವೈ ರಾಜ್ಯಾಧ್ಯಕ್ಷರಾಗುವುದು ಪಕ್ಷದಲ್ಲಿನ ಕೆಲವರಿಗೆ ಸುತರಾಂ ಇಷ್ಟವಿರಲಿಲ್ಲ. ಶತಾಯಗತಾಯ ಕೊನೆ ಕ್ಷಣದವರೆಗೂ ಇದನ್ನು ತಪ್ಪಿಸಲು ಪ್ರಯತ್ನ ನಡೆಸಿದ್ದು ಗುಟ್ಟಾಗಿ ಉಳಿದಿಲ್ಲ. ಇದರ ಪರಿಣಾಮವೇ ಮನೆಯೊಂದು ಮೂರು ಬಾಗಿಲು ಎಂಬಂಥ ಪರಿಸ್ಥಿತಿ ಬಿಜೆಪಿಯಲ್ಲಿದೆ.

ಅನಂತ್‌ಕುಮಾರ್‌ಬಣ, ಶೆಟ್ಟರ್‌ಬಣ, ಸಂತೋಷ್ ಬಣ ಜೊತೆಗೆ ಇದೀಗ ಬಿಎಸ್‌ವೈ ಬಣ ಸಕ್ರಿಯವಾಗಿರುವುದರಿಂದ ಇವೆಲ್ಲವನ್ನೂ ನಿಭಾಯಿಸುವುದು ಯಡಿಯೂರಪ್ಪ ಮೇಲಿರುವ ಮೊದಲ ಜವಾಬ್ದಾರಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಂಡವಾಗಿ ಪಕ್ಷವನ್ನು ಸಂಘಟಿಸಲು ಬಿಎಸ್‌ವೈ ಮುಂದಾಗಬೇಕಾಗಿದೆ. ಈ ಹಿಂದೆ ಯಡಿಯೂರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎನ್ನುವಂತಿತ್ತು. ಆದರೆ ಈಗಿನ ಪರಿಸ್ಥಿತಿಗೂ, ಅಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ.

ಯಡಿಯೂರಪ್ಪ ಒಂದು ಬಾರಿ ಪಕ್ಷ ಬಿಟ್ಟು ಹೋಗಿರುವುದರಿಂದ ಮೊದಲು ಪಕ್ಷದ ಮುಖಂಡರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ್, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ 2ನೆ ಹಂತದ ಹಾಗೂ ಕಿರಿಯ ನಾಯಕರಲ್ಲಿ ವಿಶ್ವಾಸ ಮೂಡಿಸಿ ಸಂಘಟಿತ ಹೋರಾಟ ಮಾಡುವ ಜವಾಬ್ದಾರಿ ಅವರ ಹೆಗಲಮೇಲಿದೆ. ಬಿಎಸ್‌ವೈ ಮೇಲಿರುವ ಬಹುದೊಡ್ಡ ಅಪವಾದವೆಂದರೆ ತಮ್ಮ ಬೆಂಬಲಿಗರು ಮತ್ತು ಕುಟುಂಬ ಸದಸ್ಯರು ಹೇಳಿದಂತೆ ಕೇಳುವುದು. ಹಿಂದೆ ಅಧಿಕಾರ ಕಳೆದುಕೊಳ್ಳಲು ಕಾರಣೀಭೂತರಾಗಿದ್ದ ಕೆಲವರನ್ನು ದೂರ ಇಡುವುದು ಮತ್ತು ಕುಟುಂಬ ಸದಸ್ಯರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳುವುದು ಅವರ ಮೇಲಿರುವ ಜವಾಬ್ದಾರಿ.

ಹೋರಾಟಕ್ಕೆ ಅಣಿ:

ಸಾಮಾನ್ಯವಾಗಿ ಯಡಿಯೂರಪ್ಪ ಅವರನ್ನು ಬಲ್ಲವರು ಹೇಳುವಂತೆ ಅವರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಹುಟ್ಟು ಹೋರಾಟಗಾರರಾದ ಬಿಎಸ್‌ವೈ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಕುಡಿಯುವ ನೀರು, ಬರಗಾಲ, ವಿದ್ಯುತ್ ಸಮಸ್ಯೆ, ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಸರ್ಕಾರದ ವಿರುದ್ಧ ಜನರ ಬಳಿ ಹೋಗಬೇಕಾದರೆ ಮೊದಲು ತಂಡವನ್ನು ಸಿದ್ಧಪಡಿಸಬೇಕು. ಇದಕ್ಕಾಗಿ ಪಕ್ಷ ನಿಷ್ಠೆ ಇರುವ ತಂಡವನ್ನು ಕಟ್ಟಬೇಕಾದ ಅಗತ್ಯವಿದೆ.

ಪದಾಧಿಕಾರಿಗಳ ನೇಮಕಾತಿ:

ಮೊದಲು ಬಿ.ಎಸ್.ಯಡಿಯೂರಪ್ಪ ನೆನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ನೇಮಕಾತಿಗೆ ಗಮನಹರಿಸಬೇಕು. ಪಕ್ಷದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಗೆ ಗಮನಹರಿಸಬೇಕಾದ ಅಗತ್ಯವಿದೆ. ಕೇಂದ್ರ ವರಿಷ್ಠರು ಕೊಟ್ಟಿರುವ ಸೂಚನೆಯಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದು ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಜವಾಬ್ದಾರಿ ಅವರ ಮೇಲಿದೆ. ಬೆಟ್ಟದಷ್ಟು ಸಮಸ್ಯೆಗಳಿರುವ ಪಕ್ಷವನ್ನು ಯಾವ ರೀತಿ ಮುನ್ನಡೆಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

Write A Comment