ಬೆಂಗಳೂರು, ಏ.9-ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ಯಶಸ್ವಿ ಕಾರ್ಯಾಚರಣೆಗಾಗಿ ಕೆಎಸ್ಆರ್ಟಿಸಿಗೆ ವರ್ಲ್ಡ್ ರಿಸೋರ್ಸ್ ಇನ್ಸ್ಸ್ಟಿಟ್ಯೂಟ್ (ಡಬ್ಲ್ಯುಆರ್ಐ) ಸಂಸ್ಥೆಯು ಕನೆಕ್ಟ್ ಕರೋ ಇಂಡಿಯಾ ಪ್ರಶಸ್ತಿ ನೀಡಿದೆ. ಜಾಗತಿಕ ಮಾನ್ಯತೆ ಪಡೆದ ಡಬ್ಲ್ಯೂ ಆರ್ಐ ಸಂಸ್ಥೆಯು ಬ್ರೆಜಿಲ್, ಚೀನಾ, ಇಂಡೋನೇಷ್ಯಾ, ಭಾರತ ಮತ್ತು ಅಮೆರಿಕ ದೇಶಗಳನ್ನೊಳಗೊಂಡಂತೆ ತನ್ನ ಶಾಖೆಯನ್ನು ಹೊಂದಿದ್ದು, ಕೆಎಸ್ಆರ್ಟಿಸಿಯ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಈ ಪ್ರಶಸ್ತಿ ನೀಡಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಕುಕನೂರ್ ಇವರು ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ಸಾರಿಗೆ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಸಂಸ್ಥೆ ಕೆಎಸ್ಆರ್ಟಿಸಿಯದ್ದಾಗಿದೆ. ಪ್ರಸ್ತುತ 10 ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿದಿನ 462 ಅನುಸೂಚಿಗಳೊಂದಿಗೆ 7353 ಟ್ರಿಪ್ಗಳು, 96,778 ಕಿಲೋಮೀಟರ್ಗಳನ್ನು ಕ್ರಮಿಸುತ್ತಿದ್ದು, 3.11 ಲಕ್ಷ ಪ್ರಯಾಣಿಕರಿಗೆ ನಗರ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ.
ಕನೆಕ್ಟ್ ಕರೋ ಇಂಡಿಯಾ ಪ್ರಶಸ್ತಿಯ ಧ್ಯೇಯವು ನಗರ ಸಾರಿಗೆಯಲ್ಲಿನ ನೂತನ ಅನ್ವೇಷಣೆಗಳು ಎಂಬುದಾಗಿದ್ದು, ಸದರಿ ಪ್ರಶಸ್ತಿಯನ್ನು ದಿಟ್ಟ, ಅನುಕರಣೀಯ, ದಕ್ಷ ಯೋಜನೆಗಳನ್ನು ಜಾರಿಗೆ ತಂದಿರುವ ವ್ಯಕ್ತಿ, ಸಮೂಹ, ಸಂಸ್ಥೆಗಳಿಗೆ ನೀಡಲಾಗುತ್ತಿದ್ದು, ಸಾರಿಗೆಯಲ್ಲಿನ ಆಮೂಲಾಗ್ರ ಬದಲಾಣೆಗೆ ನಾಂದಿ ಹಾಡಿರುವ ಉಪಕ್ರಮಗಳನ್ನು ಗುರುತಿಸುವ ಪ್ರಕ್ರಿಯೆಯಾಗಿದ್ದು, ಸಾರಿಗೆಯಲ್ಲಿನ ಬದಲಾವಣೆಗಳನ್ನು ಗುರುತಿಸಿ ಕೆಎಸ್ಆರ್ಟಿಸಿ ಸಂಸ್ಥೆಗೆ ಈ ಪ್ರಶಸ್ತಿ ನೀಡಲಾಗಿದೆ.