ಕರ್ನಾಟಕ

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಹಾಡಿನ ವಿರುದ್ಧ ಯೋಗರಾಜ್ ಭಟ್, ದುನಿಯಾ ವಿಜಯ್ ವಿರುದ್ಧ ದೂರು !

Pinterest LinkedIn Tumblr

Duniya Vijay, yogaraj bhat

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಅಧಿಕಾರಿಗಳಿಗೆ ಟಾಂಗ್ ಕೊಡುವ ರೀತಿಯಲ್ಲಿ ಬರೆಯಲಾಗಿದ್ದ ಹಾಡಿನ ವಿರುದ್ಧ ಇದೀಗ ಯೋಗರಾಜ್ ಭಟ್ ಹಾಗೂ ದುನಿಯಾ ವಿಜಯ್ ವಿರುದ್ಧ ದೂರು ದಾಖಲಾಗಿದೆ.

ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟ ದುನಿಯಾ ವಿಜಯ್ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ದೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಯೋಗರಾಜ್ ಭಟ್ ಅವರು ಹಾಡನ್ನು ರಚಿಸಿದ್ದು, ದುನಿಯಾ ವಿಜಯ್ ಅವರು ಹಾಡನ್ನು ಹಾಡಿದ್ದಾರೆ. ಹಾಡಿನಲ್ಲಿ ಯೋಗರಾಜ್ ಭಟ್ ಅವರು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ.

ಇನ್ನು ದೂರು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಹಾಡಿನಲ್ಲಿ ಅವಹೇಳನಕಾರಿ ಅಂಶವಿದೆ ಎಂಬ ಹಿನ್ನೆಲೆಯಲ್ಲಿ ನೀಡಲಾಗಿರುವ ದೂರನ್ನು ದಾಖಲು ಮಾಡಿಕೊಳ್ಳಲಾಗಿದೆ. ಆದರೆ, ಈ ಕುರಿತಂತೆ ಯಾವುದೇ ಮೊಕದ್ದಮೆಯನ್ನು ದಾಖಲು ಮಾಡಿಕೊಂಡಿಲ್ಲ. ಪ್ರಕರಣ ಸಂಬಂಧ ಮೇಲಧಿಕಾರಿಗಳ ಸೂಚನೆಮೇರೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತಂತೆ ಯೋಗರಾಜ್ ಭಟ್ ಅವರು ಪಿಸಿಎಂಬಿ ತೀಟೆ ಹಾಡು ಕೇಳ್ರಪ್ಪಾ ಎಂದು ಹೇಳಿ ಹಾಡೊಂದನ್ನು ಬರೆದಿದ್ದರು. ಹಾಡಿನಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಬಿಂಬಿಸಲಾಗಿತ್ತು. ಅಲ್ಲದೆ, ಸರ್ಕಾರ ಮತ್ತು ಪಿಯು ಬೋರ್ಡ್‌ನ ಬೇಜವಾಬ್ದಾರಿತನವನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದರು.

ಎರಡೆರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಕ್ಕಳು ಮತ್ತು ಹೆತ್ತವರು ಅನುಭವಿಸುವ ಸಂಕಟವನ್ನು ಹಾಡಿನಲ್ಲಿ ವಿವರಿಸಿದ್ದರು. ಅಲ್ಲದೆ, ಸೋರಿಕೆ ಮಾಡಿದವರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಬಯ್ಯುವ ಧಾಟಿಯಲ್ಲಿ ಹಾಡನ್ನು ಸಂಯೋಜನೆ ಮಾಡಿದ್ದರು. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡಿಗೆ ನಟ ದುನಿಯಾ ವಿಜಯ್ ಅವರು ದನಿಯಾಗಿದ್ದಾರೆ.

Write A Comment