ಬೆಂಗಳೂರು, ಏ. ೩- ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು. ಬಿರುಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತಗಳು ಸಜ್ಜುಗೊಳ್ಳಬೇಕು ಎಂದು ಉತ್ತರ ಕರ್ನಾಟಕದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕ್ರಿಯಾ ಯೋಜನೆ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು 12 ಜಿಲ್ಲೆಗಳ ಡಿಸಿ ಮತ್ತು ಸಿಇಒಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ ಆಯಾ ಕ್ಷೇತ್ರಗಳ ಶಾಸಕರ ಸಭೆ ನಡೆಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದರು.
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲು ಹಣದ ಕೊರತೆ ಇಲ್ಲ. ಈಗಾಗಲೇ ಜಿಲ್ಲಾಡಳಿತಗಳ ಬಳಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಪ್ರತಿಕೂಲ ಪರಿಸ್ಥಿತಿ ಉಂಟಾಗದಂತೆ ನಿಗಾ ವಹಿಸಬೇಕು ಎಂದರು.
ಖಾಸಗಿ ಟ್ಯಾಂಕರ್ ಬಳಸಿ
ನೀರಿನ ಸಂಪನ್ಮೂಲ ಇರದ ಕಡೆ ಜಿಲ್ಲಾಧಿಕಾರಿಗಳೇ ಖುದ್ದು ನಿಂತು ನೀರಿನ ಟ್ಯಾಂಕರ್ಗಳ ಮೂಲಕ ಎಲ್ಲೆಡೆ ನೀರು ಪೂರೈಸಬೇಕು. ಅಗತ್ಯಬಿದ್ದಲ್ಲಿ ಖಾಸಗಿ ನೀರಿನ ಟ್ಯಾಂಕರ್ ಅನ್ನು ಪಡೆದು ನೀರು ಪೂರೈಸುವಂತೆ ಸೂಚನೆ ನೀಡಿದರು.
ಕುಡಿಯುವ ನೀರಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು. ಜನ ಮತ್ತು ಜಾನುವಾರುಗಳ ವಲಸೆಯನ್ನು ತಡೆಗಟ್ಟಬೇಕು.
ಯಾವುದೇ ಸಂದರ್ಭದಲ್ಲೂ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯದಂತೆ ಅಗತ್ಯ ಎಚ್ಚರಿಕೆ ವಹಿಸಿ ಜನತೆಯಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.
ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೃಷಿ ಚಟುವಟಿಕೆಗಳು ಅಷ್ಟಾಗಿ ನಡೆಯುವುದಿಲ್ಲ. ಹಾಗಾಗಿ ಕೃಷಿಕರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ನರೇಗಾ ಹಣವನ್ನು ಸದ್ಭಳಕೆ ಮಾಡಿಕೊಂಡು ದುಡಿಯುವ ಕೈಗೆ ಉದ್ಯೋಗ ಸೃಷ್ಟಿಸಬೇಕೆಂದು ಹೇಳಿದರು.
ಸಮರೋಪಾದಿ ಕೆಲಸ
ಯಾವುದೇ ಸಂದರ್ಭದಲ್ಲೂ ಪರಿಹಾರ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಬಾರದು. ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಾನುವಾರುಗಳಿಗಾಗಿ ಮೇವು ದಾಸ್ತಾನು ಇಟ್ಟುಕೊಳ್ಳಬೇಕು. ಕಚೇರಿಗಳಲ್ಲಿ ಕುಳಿತುಕೊಳ್ಳದೆ ಸ್ಥಳಕ್ಕೆ ಭೇಟಿ ನೀಡಿ ಜನ, ಜಾನುವಾರುಗಳ ಪರಿಸ್ಥಿತಿಯ ಬಗ್ಗೆ ವರದಿ ಸಿದ್ಧಪಡಿಸಬೇಕು. ಗೋಶಾಲೆಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದರು.
ಬರಪೀಡಿತ ಪ್ರದೇಶಗಳಲ್ಲಿನ ಅಧಿಕಾರಿಗಳು ರಜೆ ಪಡೆಯಬಾರದು. ಕೇಂದ್ರ ಸ್ಥಾನದಲ್ಲೇ ಇದ್ದುಕೊಂಡು ಆ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ತಲಾ 50 ಲಕ್ಷ ಬಿಡುಗಡೆ
189 ತಾಲೂಕುಗಳಿಗೆ ತಲಾ 50 ಲಕ್ಷ ರೂ. ಗಳನ್ನು ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿದೆ. ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬೇಸಿಗೆಯ ವೇಳೆ ಅಧಿಕಾರಿಗಳು ಬರದ ಸ್ಥಿತಿಯನ್ನು ಸಮರ್ಪಣಾ ಮನೋಭಾವದಿಂದ ಎದುರಿಸಬೇಕು ಎಂದು ಹೇಳಿದರು.
ರಜೆಗೆ ಅನುಮತಿ ಕಡ್ಡಾಯ
ಅಧಿಕಾರಿಗಳು ರಜೆ ಪಡೆಯಬೇಕಾದರೆ, ಉನ್ನತ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.
ವಿಪತ್ತು ನಿರ್ವಹಣಾ ತಂಡ ಸದಾ ಸನ್ನದ್ಧರಾಗಬೇಕು. ವೈದ್ಯರ ತಂಡ ಸಜ್ಜಾಗಬೇಕು. ಔಷಧಿ ದಾಸ್ತಾನಿಗೆ ಕೊರತೆ ಇರಬಾರದು ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಂದ ಕುಡಿಯುವ ನೀರು, ಮೇವು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಪರಿಹಾರ ಕಾಮಗಾರಿಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್ ಮತ್ತು ಕೃಷಿ, ತೋಟಗಾರಿಕೆ, ಆರೋಗ್ಯ, ಕಂದಾಯ ಸೇರಿದಂತೆ, ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.