ಕರ್ನಾಟಕ

ವರದಕ್ಷಿಣಿ ಕಿರುಕುಳ : ಅನುಮಾನಸ್ಪದವಾಗಿ ಮಹಿಳೆ ಸಾವು

Pinterest LinkedIn Tumblr

suಚನ್ನಪಟ್ಟಣ, ಏ.3- ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬರು ವರದಕ್ಷಿಣಿ ಕಿರುಕುಳದ ಹಿನ್ನೆಲೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೇಲೂರು ತಾಲ್ಲೂಕು ನವಿಲೆಹಳ್ಳಿ ಗ್ರಾಮದ ಮಂಜೇಗೌಡರ ಮಗಳು ಎಂ.ಎನ್.ಜ್ಯೋತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ.

ಘಟನೆ ವಿವರ: ಕಳೆದ ಎರಡು ವರ್ಷಗಳ ಹಿಂದೆ ಚಿಕ್ಕಮಗಳೂರು ತಾಲ್ಲೂಕು ಗಂಜಲಗೂಡು ಗ್ರಾಮದ ಕೆಂಚೇಗೌಡರ ಮಗ ಹೊನ್ನೇಗೌಡ ಎಂಬಾತನಿಗೆ ಲಕ್ಷಾಂತರ ರೂ. ವರದಕ್ಷಿಣೆ ನೀಡಿ ವಿವಾಹ ಮಾಡಿಕೊಡಲಾಗಿತ್ತು.ಕಳೆದ ವರ್ಷ ಹೊನ್ನೇಗೌಡ ಪತ್ನಿ ಹಾಗೂ ಮಗುವಿನೊಂದಿಗೆ ಚನ್ನಪಟ್ಟಣದಲ್ಲಿ ಬೇಕರಿ ಇಟ್ಟುಕೊಂಡು ವಾಸಮಾಡುತ್ತಿದ್ದ. ತಾನು ಇನ್ನೊಂದು ಬೇಕರಿ ಇಡಬೇಕು ತವರಿಗೆ ಹೋಗಿ ಹೆಚ್ಚು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಆಗಾಗ್ಗೆ ಜ್ಯೋತಿಯ ಪೋಷಕರು ಅಳಿಯನಿಗೆ ಬುದ್ದಿವಾದ ಹೇಳಿ ಹೋಗುತ್ತಿದ್ದರು. ನಿನ್ನೆ ಸಂಜೆ ದಂಪತಿ ನಡುವೆ ವರದಕ್ಷಿಣೆ ವಿಷಯವಾಗಿ ಜಗಳವಾಗಿದೆ. ವಿಷಯ ತಿಳಿದು ಜ್ಯೊತಿಯ ತಂದೆ-ತಾಯಿ ಅಳಿಯನನ್ನು ಸಮಾಧಾನಪಡಿಸಿ ಠಾಣೆಗೆ ಕರೆದೊಯ್ದು ಪೊಲೀಸರಿಂದ ಬುದ್ದಿವಾದ ಹೇಳಿಸಿ ಕಳುಹಿಸಿದ್ದರು.

ಮನೆಗೆ ಬರುತ್ತಿದ್ದಂತೆ ಹೊನ್ನೇಗೌಡ ಪತ್ನಿ ಜ್ಯೋತಿಯೊಂದಿಗೆ ಕ್ಯಾತೆ ತೆಗೆದು ಜಗಳ ಮಾಡಿದ್ದ. ಅಷ್ಟರಲ್ಲಿ ಹೊನ್ನೇಗೌಡನ ತಂಗಿ ದಾಕ್ಷಾಯಿಣಿ ಬಂದು ನನ್ನ ಅಣ್ಣನನ್ನು ಠಾಣೆಗೆ ಕರೆಸಿ ಅವಮಾನ ಮಾಡಿದ್ದೀಯಾ ಎಂದು ಜಗಳ ಮಾಡಿ ನಿಂದಿಸಿದ್ದಾಳೆ. ಗಲಾಟೆ ಜೋರಾದಾಗ ಸ್ಥಳೀಯರು ಜ್ಯೋತಿಯ ತಂದೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಂದೆ-ತಾಯಿ ಬರುವಷ್ಟರಲ್ಲಿ ಜ್ಯೋತಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸಿಪಿಐ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದಾಗ ವರದಕ್ಷಿಣೆ ಕಿರುಕುಳ ನೀಡಿ ಅಳಿಯ ಹಾಗೂ ಆತನ ಅಣ್ಣ ಮತ್ತು ತಂಗಿ ಕಿರುಕುಳ ನೀಡಿ ತಮ್ಮ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಜ್ಯೋತಿಯ ಪೋಷಕರು ದೂರು ನೀಡಿದ್ದಾರೆ.

ಇಂದು ಬೆಳಗ್ಗೆ ಹೊನ್ನೇಗೌಡ ಚಿಕ್ಕಮಗಳೂರಿನ ಬಸ್ ಹತ್ತಿ ಪರಾರಿಯಾಗಲು ಯತ್ನಿಸಿದಾಗ ಮಿಂಚಿನ ಕಾರ್ಯಾಚರಣೆ ನಡೆಸಿದ ಸಿಪಿಐ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊನ್ನೇಗೌಡನ ತಂಗಿ ಮತ್ತು ಅಣ್ಣ ನಾಪತ್ರೆಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment