ಕರ್ನಾಟಕ

ಖಾಸಗಿ ಆಸ್ಪತ್ರೆ ವೈದ್ಯನ ಅಡ್ಡಾದಿಡ್ಡಿ ಚಾಲನೆಗೆ ವ್ಯಕ್ತಿ ಬಲಿ

Pinterest LinkedIn Tumblr

accಬೆಂಗಳೂರು: ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ತಮ್ಮ ಮರ್ಸಿಡೆಸ್‌ ಬೆಂಝ್ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ್ದರಿಂದ ಸಂಭವಿಸಿದ “ಸರಣಿ ಅಪಘಾತ’ದಲ್ಲಿ ಟೈಲರ್‌ ಸಾವನ್ನಪ್ಪಿ, ಮೂವರು ಮಹಿಳೆಯರು ಸೇರಿ ಐವರು ಗಾಯಗೊಂಡಿರುವ ಘಟನೆ ಬೈರಸಂದ್ರ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದಿದೆ.

ಬೈರಸಂದ್ರ ಮುಖ್ಯರಸ್ತೆ ಸಮೀಪದ ನಿವಾಸಿ ರಿಜ್ವಾನ್‌ ಪಾಷ ಅಲಿಯಾಸ್‌ ಮೊಹಮ್ಮದ್‌ ಖಾನ್‌ (54) ಮೃತ ದುರ್ದೈವಿ. ಈ ಅವಘಡದಿಂದ ರೊಚ್ಚಿಗೆದ್ದ ಸಾರ್ವಜನಿಕರು ಕಾರು ಚಾಲನೆ ಮಾಡುತ್ತಿದ್ದ ಡಾ.ಶಂಕರ್‌ ಅವರನ್ನು ಮನಬಂದಂತೆ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಸರಣಿ ಅಪಘಾತದಲ್ಲಿ ಗಾಯಗೊಂಡಿರುವ ರಿಜ್ವಾನ್‌ ಪಾಷ ಅವರ ಪತ್ನಿ ಮೌಸಿನಾ ಬೇಗಂ, ಬೈಕ್‌ ಸವಾರರಾದ ಅಂಜುಮ್‌ ಖಾನ್‌, ಸಾಜಿದ್‌ ಖಾನ್‌ ಹಾಗೂ ಸಾದಿಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಮೂರು ಕಾರು ಹಾಗೂ ಮೂರು ಬೈಕ್‌ಗಳು ಜಖಂಗೊಂಡಿವೆ.
ಅಶೋಕ ಫಿಲ್ಲರ್‌ ಕಡೆಯಿಂದ ಬೈರಸಂದ್ರ ಮುಖ್ಯರಸ್ತೆಯಲ್ಲಿ ತಮ್ಮ ಮನೆಗೆಲಸದಾಳು ಸರಿತಾ ಹಾಗೂ ಆಕೆಯ ಎರಡೂವರೆ ವರ್ಷದ ಪುತ್ರಿ ಜತೆ ಡಾ.ಶಂಕರ್‌ ಕಾರಿನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು 1.5 ಕಿ.ಮೀ. ಅಡ್ಡಾದಿಡ್ಡಿ ಚಾಲನೆ: ಡಾ.ಎನ್‌.ಎಸ್‌.ಶಂಕರ್‌ ಅವರು ಮಧ್ಯಾಹ್ನ 2.10ರ ವೇಳೆಗೆ ಅಶೋಕ ಫಿಲ್ಲರ್‌ ಮಾರ್ಗವಾಗಿ ತಮ್ಮ ಮರ್ಸಿಡಿಜ್‌ ಬೆಂಝ್ ಕಾರಿನಲ್ಲಿ ಬೈರಸಂದ್ರ ಮುಖ್ಯರಸ್ತೆಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ವೈದ್ಯರಿಗೆ ಅಶೋಕ ಫಿಲ್ಲರ್‌ ದಾಟಿದ ಕೂಡಲೇ ಕಾರಿನ ಮೇಲೆ ನಿಯಂತ್ರಣ ತಪ್ಪಿದೆ. ಇದರಿಂದ ಮುಂದೆ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ವೈದ್ಯರ ಕಾರು ಉಜ್ಜಿದೆ. ಆದರೂ ವಾಹನ ನಿಲ್ಲಿಸದೆ ಮುಂದೆ ಸಾಗಿದ ಡಾ. ಶಂಕರ್‌ ಮಾಧವ ಪಾರ್ಕ್‌ ಬಳಿ ಎಡ ತಿರುವು ತೆಗೆದುಕೊಳ್ಳುವಾಗ ಎರಡು ಬೈಕ್‌ಗಳಿಗೆ ತಮ್ಮ ಕಾರು ಗುದ್ದಿಸಿದ್ದಾರೆ. ಈ ಅಪಘಾತಗಳಿಂದ ಬೈಕ್‌ನಲ್ಲಿದ್ದ ಅಂಜುಖಾನ್‌, ಸಾಜಿದ್‌ ಖಾನ್‌ ಹಾಗೂ ಸ್ವಿಫ್ಟ್ ಕಾರಿನಲ್ಲಿದ್ದ ತಂಜೀಮ್‌ ಅವರಿಗೆ ಗಾಯವಾಗಿದೆ.

ಅಲ್ಲಿಂದ ಶರವೇಗದಲ್ಲಿ ಬೈರಸಂದ್ರ ಮುಖ್ಯರಸ್ತೆಗೆ ಬಂದ ವೈದ್ಯರ ಕಾರು, ಅಲ್ಲಿ ಝೆನ್‌ ಕಾರಿಗೆ ಹಿಂದಿನಿಂದ ಅಪ್ಪಳಿಸಿದೆ. ನಂತರ ಮುಂದೆ ಹೋಗುತ್ತಿದ್ದ ಇಂಡಿಕಾ ಕಾರಿಗೆ ಡಿಕ್ಕಿಯಾಗಿದ್ದು, ಇದರಿಂದ ಇಂಡಿಕಾ ಕಾರು ರಸ್ತೆ ಕಂಬಕ್ಕೆ ಗುದ್ದಿ ನಿಂತಿದೆ. ಆದರೂ ನಿಲ್ಲದ ಬೆಂಝ್ ಕಾರು ಹೋಂಡಾ ಡಿಯೋ ಸ್ಕೂಟರ್‌ಗೆ ಡಿಕ್ಕಿಯಾಗಿ ನಂತರ ರಸ್ತೆ ಬದಿ ಬೈಕ್‌ ನಿಲ್ಲಿಸಿಕೊಂಡಿದ್ದ ಟೈಲರ್‌ ರಿಜ್ವಾನ್‌ ಹಾಗೂ ಮೌಸಿನಾ ಖಾನ್‌ ಮೇಲೆ ಹರಿದು ನಂತರ ರಸ್ತೆ ಬದಿ ರತ್ನಮ್ಮ ಎಂಬುವರಿಗೆ ಸೇರಿದ ಮನೆಗೆ ನುಗ್ಗಿ ನಿಂತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಸರಣಿ ಅಪಘಾತದಿಂದ ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖೀಸಲಾಯಿತು. ಆದರೆ, ಚಿಕಿತ್ಸೆ ಫ‌ಲಿಸದೆ ರಿಜ್ವಾನ್‌ ಸಾವನ್ನಪ್ಪಿದ್ದು, ಅವರ ಪತ್ನಿ ಮೌಸಿನಾ ಪ್ರಾಣಪಾಯದಿಂದ ಪರಾಗಿದ್ದಾರೆ. ಉಳಿದವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಜ್ವಾನ್‌ ಬೈರಸಂದ್ರ ಮುಖ್ಯರಸ್ತೆ ಪಕ್ಕದ ಹಿಂದಿನ ಬೀದಿಯಲ್ಲಿ ವಾಸವಾಗಿದ್ದು, ಮಧ್ಯಾಹ್ನ ಮಕ್ಕಳಿಗೆ ಊಟ ತೆಗೆದುಕೊಂಡು ಹೋಗಲು ದಂಪತಿ ಬಂದಿದ್ದರು.

ಈ ಮಧ್ಯೆ ಕಾರು ಮನೆಗೆ ನುಗ್ಗಿದಾಗ ರತ್ನಮ್ಮ ಅವರು ಮನೆಗೆ ಬೀಗ ಹಾಕಿ ಹೊರಹೋಗಿದ್ದರು. ಹೀಗಾಗಿ ಮತ್ತಷ್ಟು ಪ್ರಾಣಹಾನಿ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ವಿಲ್ಸನ್‌ ಗಾರ್ಡನ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯನಿಗೆ ಬಿತ್ತು ಗೂಸ
ಸರಣಿ ಅಪಘಾತದಿಂದ ಕೆರಳಿದ ಸ್ಥಳೀಯರು, ಡಾ.ಶಂಕರ್‌ ಅವರನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ವೈದ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ಕೂಡಲೇ ತಮ್ಮ ಮಗು ಜತೆ ಪರಾರಿಯಾಗಿದ್ದ ವೈದ್ಯರ ಮನೆಗೆಲಸದಾಳು ಸರಿತಾ ಕೆಲ ಹೊತ್ತಿನ ಬಳಿಕ ಘಟನಾ ಸ್ಥಳಕ್ಕಾಗಮಿಸಿದಾಗ ಆಕೆಯ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರ ಮಧ್ಯಪ್ರವೇಶಿದಿಂದ ಪರಿಸ್ಥಿತಿ ತಿಳಿಯಾಗಿದೆ ಎಂದು ಮೂಲಗಳು ಹೇಳಿವೆ.

ಸ್ವಂತ ಕ್ಲಿನಿಕ್‌ ಹೊಂದಿರುವ ಶಂಕರ್‌: ಡಾ.ಶಂಕರ್‌ ಮೂಳೆ ತಜ್ಞರಾಗಿದ್ದು, ಸಿದ್ಧಾರ್ಥ್ ನಗರದಲ್ಲಿ ಸ್ವಂತ ಕ್ಲಿನಿಕ್‌ ಹೊಂದಿದ್ದಾರೆ. ಜಯನಗರದ 4ನೇ ಹಂತದಲ್ಲಿ ನೆಲೆಸಿರುವ ಶಂಕರ್‌ ವಿರುದ್ಧ ಇತ್ತೀಚೆಗೆ ಪತ್ನಿ ಜಯನಗರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕರ್‌ನಿಂದ ಪಾನಮತ್ತ ಚಾಲನೆ?
ಡಾ.ಶಂಕರ್‌ ಮದ್ಯಸೇವಿಸಿ ಕಾರು ಚಾಲನೆ ಮಾಡಿದ್ದರಿಂದ ಸರಣಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಆದರೆ, ವೈದ್ಯರ ಕಾರಿನಲ್ಲಿದ್ದ ಅವರ ಮನೆಗೆಲಸದಾಳು ಸರಿತಾ ನೀಡಿರುವ ಹೇಳಿಕೆ ಪ್ರಕಾರ, ವೈದ್ಯರಿಗೆ ಮೂಛೆì ರೋಗ ಬಂದಿತ್ತು. ಇದರಿಂದ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಮನಬಂದಂತೆ ಕಾರು ನುಗ್ಗಿದೆ.

ಸರಣಿ ಅಪಘಾತ ಸಂಬಂಧ ಡಾ.ಶಂಕರ್‌ ವಿರುದ್ಧ ಐಪಿಸಿ 304 (ಉದ್ದೇಶಪೂರ್ವಕವಲ್ಲದ ಕೊಲೆ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದ ವೇಳೆ ಆರೋಪಿ ಪಾನಮತ್ತರಾಗಿದ್ದರೇ ಎಂಬುದು ವೈದ್ಯಕೀಯ ವರದಿ ಬಳಿಕ ಸ್ಪಷ್ಟವಾಗಲಿದೆ.
– ಎಸ್‌.ಕೆ.ಬಾಬಾ, ಡಿಸಿಪಿ, ಪೂರ್ವ ವಿಭಾಗ (ಸಂಚಾರ)
-ಉದಯವಾಣಿ

Write A Comment