ಕರ್ನಾಟಕ

ಬಿಎಸ್‌ ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಬೇಡ, ಸಿಎಂ ಅಭ್ಯರ್ಥಿ ಆಗಲಿ

Pinterest LinkedIn Tumblr

bsyಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಪ್ರಶ್ನಾತೀತ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವುದಕ್ಕೆ ಪಕ್ಷದ ಅಗ್ರಪಂಕ್ತಿ ನಾಯಕರ ಪೈಕಿ ಹಲವರ ವಿರೋಧ ಇದ್ದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವುದಕ್ಕೆ ಮಾತ್ರ ಉತ್ಸುಕತೆ ತೋರುತ್ತಿರುವುದು ಮತ್ತು ಇದರ ಸುತ್ತ ವಿವಿಧ ರೀತಿಯ ಚರ್ಚೆಗಳು ಗಿರಕಿ ಹೊಡೆಯುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಈಗ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಮುಂದಿನ ಎರಡು ವರ್ಷಗಳ ಕಾಲ ಅವರ ಪರಮಾಪ್ತರು ಹಾಗೂ ಬೆಂಬಲಿಗರು ಪಕ್ಷದ ಪ್ರಮುಖ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ
ಇತರರ ಮೇಲೆ ಸವಾರಿ ಮಾಡಬಹುದು ಎಂಬ ಆತಂಕವೇ ಇದಕ್ಕೆಲ್ಲ ಪ್ರಮುಖ ಕಾರಣ.

ಕೇವಲ ಬಿಜೆಪಿ ನಾಯಕರಲ್ಲಿ ಅಷ್ಟೇ ಅಲ್ಲ. ಸಂಘ ಪರಿವಾರದ ಮುಖಂಡರಲ್ಲೂ ಈ ಆತಂಕವಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟದೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿಸುವ ಭರವಸೆ ನೀಡುವ ಮೂಲಕ ಸದ್ಯಕ್ಕೆ ಪಕ್ಷದ ಪ್ರಮುಖ ಜವಾಬ್ದಾರಿಯಿಂದ
ಹೊರಗಿಡುವ ಚಿಂತನೆ ಗಂಭೀರವಾಗಿ ನಡೆದಿದೆ.

ಆದರೆ, ಇದಕ್ಕೆ ಯಡಿಯೂರಪ್ಪ ಅಷ್ಟು ಸುಲಭವಾಗಿ ತಲೆಯಾಡಿಸುವ ಸಾಧ್ಯತೆ ಕಡಮೆ ಎನ್ನಲಾಗಿದೆ.
ಪಕ್ಷದ ಬಹುತೇಕ ಎಲ್ಲ ಹಿರಿಯ ನಾಯಕರಿಗೂ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ. ಅವರ ನಾಯಕತ್ವದಲ್ಲೇ ಮುನ್ನಡೆದರೆ ಪಕ್ಷ ಮತ್ತೂಮ್ಮೆ ಅಧಿಕಾರದ ಗದ್ದುಗೆ ಏರಬಹುದು. ಮೇಲಾಗಿ ಈಗ ಯಡಿಯೂರಪ್ಪ ಅವರು ಮೊದಲಿನಂತಿಲ್ಲ. ಮೃದುವಾಗಿದ್ದಾರೆ ಎಂಬ ಭಾವನೆಯೂ ಅನೇಕರ ಅನುಭವಕ್ಕೆ ಬಂದಿದೆ.

ಆದರೆ, ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಅವರ ಆಪ್ತರೇ ಯಡಿಯೂರಪ್ಪ ಅವರ ಮೂಲಕ ಪಕ್ಷವನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ಈಗಾಗಲೇ ಹಿಂದೊಮ್ಮೆ ಇದನ್ನೆಲ್ಲ ಅನುಭವಿಸಿಯಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಲವು ನಾಯಕರು “ಉದಯವಾಣಿ’ ಜತೆ ಮಾತನಾಡಿ ತಮ್ಮ
ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಖುದ್ದು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಭರವಸೆ ನೀಡಿದರೆ ಅಧ್ಯಕ್ಷ ಗಾದಿಯ ಹಾದಿ ಸುಗಮವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇದು ಕಷ್ಟಸಾಧ್ಯದ ಮಾತು.
ಹೀಗಾಗಿಯೇ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಬದಲು ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ನೀವೇ ಎಂಬ
ಭರವಸೆ ನೀಡಿ ಈಗ ಅವರನ್ನು ಪಕ್ಷದ ಪರ ಪ್ರವಾಸ ಮತ್ತು ಪ್ರಚಾರಕ್ಕೆ ಸತತವಾಗಿ ಬಳಸಿಕೊಳ್ಳುವ
ಉದ್ದೇಶ ಹೊಂದಲಾಗಿದೆ.

ಒಂದು ಮಾತಂತೂ ಸತ್ಯ. ಯಡಿಯೂರಪ್ಪ ಅವರನ್ನು ಹೊರಗಿಟ್ಟು ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವ ಧೈರ್ಯ ಪಕ್ಷದ ಯಾವ ನಾಯಕರಿಗೂ ಇಲ್ಲ. ಆ ಬಗ್ಗೆ ಯೋಚನೆಯೂ ಇಲ್ಲ. ಹಾಗಂತ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಕ್ಕೂ ಮನಸ್ಸಿಲ್ಲ. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಭರವಸೆ ನೀಡಿ ಪಕ್ಷಕ್ಕೆ ಸಕ್ರಿಯವಾಗಿ ಬಳಸಿಕೊಳ್ಳುವ ಪ್ರಸ್ತಾಪ ಕೇಳಿಬಂದಿದೆ.

ಸಿಎಂ ಅಭ್ಯರ್ಥಿ ಪ್ರಸ್ತಾಪ ಒಪ್ತಾರಾ?: ಆದರೆ, ಈಗ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸದೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸುವ ಪ್ರಸ್ತಾಪಕ್ಕೆ ಯಡಿಯೂರಪ್ಪ ಒಪ್ಪಿಕೊಳ್ಳುವ ಸಾಧ್ಯತೆಯೂ ಕಡಮೆಯಿದೆ. ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಲ್ಲಿ ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು
ಕಣಕ್ಕಿಳಿಸುವ, ಟಿಕೆಟ್‌ ಹಂಚುವ ನಿರ್ಣಾಯಕ ಪಾತ್ರ ವಹಿಸಬಹುದು. ಆದರೆ, ಮುಖ್ಯಮಂತ್ರಿ
ಅಭ್ಯರ್ಥಿಯಾದರೆ ಇದೆಲ್ಲದರಿಂದ ದೂರ ಉಳಿಯಬೇಕಾಗುತ್ತದೆ. ತಮ್ಮ ಬೆಂಬಲಿಗರು ಶಾಸಕರಾಗದೆ ಬೇರೆಯವರು ಗೆದ್ದು ಬಂದಲ್ಲಿ ಮುಂದೆ ಚುನಾವಣೆ ನಂತರ ಮುಖ್ಯಮಂತ್ರಿಯಾಗುವ ವೇಳೆ ಬೆಂಬಲ ನೀಡುವ ಭರವಸೆ ಏನು? ಪಕ್ಷದ ಶಾಸಕರು ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಲು ಬೆಂಬಲ
ನೀಡಿದರೆ ಆಗ ಗತಿಯೇನು ಎಂಬುದು ಯಡಿಯೂರಪ್ಪ ಅವರ ಆಪ್ತರಲ್ಲಿರುವ ಆತಂಕ. ಮೇಲಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆ ಇನ್ನೂ ಎರಡು ವರ್ಷ ಬಾಕಿಯಿರುವ ಈ ವೇಳೆ ಮಾಡುವುದು ಕಷ್ಟ. ಚುನಾವಣೆಯ ಕಾವು ಏರಿದ ಸಂದರ್ಭ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದು ಸಾಮಾನ್ಯ. ಅಲ್ಲಿವರೆಗೆ ಪಕ್ಷದ ಜವಾಬ್ದಾರಿ, ಅಧಿಕಾರದಿಂದ ದೂರ ಇರಬೇಕಲ್ಲ ಎಂಬ
ಪ್ರಶ್ನೆಯೂ ಯಡಿಯೂರಪ್ಪ ಬೆಂಬಲಿಗರಲ್ಲಿದೆ. ಈ ದಿಕ್ಕಿನಲ್ಲಿಯೇ ಯಡಿಯೂರಪ್ಪ ಅವರೂ ಚಿಂತನೆ
ನಡೆಸುತ್ತಿದ್ದಾರೆ.
-ಉದಯವಾಣಿ

Write A Comment