ಕರ್ನಾಟಕ

ಕಳಸ ಬಂಡೂರಿಗೆ ಕಹಳೆ : ರಾಜ್ಯದ ವಿವಿಧೆಡೆ ಪ್ರತಿಭಟನೆ-ರೈಲು ಸಂಚಾರ ಏರುಪೇರು

Pinterest LinkedIn Tumblr

kalasaಬೆಂಗಳೂರು,ಮಾ.೨೬- ಕಳಸಾ-ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಚುರುಕುಗೊಂಡಿದ್ದು, ಇಂದು ವಿವಿಧ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ರೈಲು ಬಂದ್ ನಡೆಸಿದವು.
ಕಳಾಸ ಬಂಡೂರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಕೇಂದ್ರದ ಮೇಲೆ ಒತ್ತಡ ತರಲು ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರೈಲು ತಡೆ ನಡೆಸಿದ್ದರಿಂದ ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು.
ಬೆಂಗಳೂರು, ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ಕೋಲಾರ, ಮಾಲೂರು ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಪರ ಸಂಘಟನೆಗಳು ಇಂದು ಬೆಳಗ್ಗೆ ಹತ್ತಿರದ ರೈಲು ನಿಲ್ದಾಣಗಳಿಗೆ ಧಾವಿಸಿ ರೈಲು ತಡೆ ನಡೆಸಿ, ಕಳಸಾ ಬಂಡೂರಿ, ಮಹಾದಾಯಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿದರು.

* ಬೆಂಗಳೂರಿನಲ್ಲಿ ರೈಲು ನಿಲ್ದಾಣಕ್ಕೆ ಮುತ್ತಿಗೆ
* ಪೊಲೀಸರ ಸರ್ಪಗಾವಲು-ಹಲವರ ಬಂಧನ
* ಹಲವು ರೈಲು ಸಂಚಾರ ಏರುಪೇರು
* ಮೈಸೂರಿನಲ್ಲಿ ಪ್ರತಿಭಟನೆಯ ಕಾವು
* ಉತ್ತರ ಕರ್ನಾಟಕದಲ್ಲಿ ಕೇಂದ್ರದ ವಿರುದ್ಧ ಧಿಕ್ಕಾರದ ಕೂಗು

ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸರು ಕರೆದೊಯ್ದ ಬಳಿಕ ರೈಲುಗಳ ಸಂಚಾರ ಸುಗಮಗೊಂಡಿತು. ಬೆಂಗಳೂರಿನಲ್ಲಿ ವಾಟಾಳ್ ನೇತೃತ್ವದಲ್ಲಿ ಟೌನ್‌ಹಾಲ್‌ನಿಂದ ರೈಲು ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಮೆಜೆಸ್ಟಿಕ್, ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ಕೆಲ ಕಾಲ ರೈಲು ತಡೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಕಳಸ ಬಂಡೂರಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸಜ್ಜಾಗಿವೆ. ಈಗಾಗಲೇ ಕಳಸ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಸಾಕಷ್ಟು ಹೋರಾಟಗಳನ್ನು ಮಾಡಲಾಗಿದೆ.
ಇಷ್ಟಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನಹರಿಸುತ್ತಿಲ್ಲ. ಹೀಗಾಗಿ ಕೇಂದ್ರಕ್ಕೆ ನಮ್ಮ ಹೋರಾಟದ ಕಾವು ಏನು ಎಂಬುದನ್ನು ಮನವರಿಕೆ ಮಾಡಲು ರೈಲು ತಡೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಳಸ ಬಂಡೂರಿ ಅನುಷ್ಠಾನ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಲು ನಾವು ಸಿದ್ದರಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ರಾಜ್ಯಕ್ಕೆ ಬಂದರೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಚಕಾರ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಬಿಜೆಪಿ ಸಂಸದರು ಪ್ರಧಾನಿಯವರಿಗೆ ಮನವೊಲಿಸಲು ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ವಾಚ್ ಮಾತ್ರ ಕಾಣಿಸುತ್ತದೆ. ಅವರಿಗೆ ಈ ಭಾಗದ ನೀರಿನ ಸಮಸ್ಯೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯಮಾವಳಿ ಮಂಡಳಿ ಕಳಸ ಬಂಡೂರಿ ಯೋಜನೆ ಬಗ್ಗೆ ಮಾತನಾಡಬೇಕಿತ್ತು. ಆದರೆ ಅವರು ಕೂಡ ಸುಮ್ಮನಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಶಿವರಾಮೇಗೌಡ, ಪ್ರವೀಣ್‌ಕುಮಾರ್ ಶೆಟ್ಟಿ, ಗಿರೀಶ್‌ಗೌಡ ಮತ್ತಿತರರು ಭಾಗವಹಿಸಿದ್ದರು.
ಮಾತಿನ ಚಕಮಕಿ: ಬಂಧನ
ಕರವೇ ಸಂಘಟನೆಯ ಕಾರ್ಯಕರ್ತರು ಶಿವಾಜಿನಗರದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಮೆರವಣಿಗೆ ಮೂಲಕ ಆಗಮಿಸುತ್ತಿದ್ದರು. ಅವರನ್ನು ಪೊಲೀಸರು ಸಿಎಸ್‌ಐ ಆಸ್ಪತ್ರೆ ಬಳಿ ತಡೆದು ರೈಲು ನಿಲ್ದಾಣಕ್ಕೆ ಪ್ರವೇಶಿಸಿದಂತೆ ನಿರ್ಬಂಧ ಹೇರಿದರು. ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ನಡೆಯಿತು. ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಕರವೇಯಿಂದ ಹರಿಪ್ರಿಯಾ ರೈಲು ತಡೆ:
ಮಹಾದಾಯಿ ಮತ್ತು ಕಳಸ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಧಾರವಾಡದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ರೈಲು ನಿಲ್ದಾಣದಲ್ಲಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು.
ಸುಮಾರು ೯ ಗಂಟೆ ಸಮಯದಲ್ಲಿ ೩೦ಕ್ಕೂ ಹೆಚ್ಚಿನ ಕಾರ್ಯಕರ್ತರು, ಜಿಲ್ಲಾ ಅಧ್ಯಕ್ಷ ರಾಜು ಕಡೆಮನಿ ಅವರ ನೇತೃತ್ವದಲ್ಲಿ ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಮಹಾದಾಯಿ ಜಾರಿಗಾಗಿ ಸಹಕರಿಸಬೇಕೆಂದು ಒತ್ತಾಯಿಸಿದರು.
ಪ್ರಧಾನ ಮಂತ್ರಿಗಳು ಈ ಕುರಿತು ಮೌನ ಮುರಿದು ಅಗತ್ಯ ಕ್ರಮ ಜರುಗಿಸಬೇಕು ಇಲ್ಲದೇ ಇದ್ದರೆ ಹೋರಾಟ ಉಗ್ರರೂಪ ತಾಳುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರುದ್ರೇಶ ಹಿರೇಮಠ, ಮಾರುತಿ ವಡ್ಡರ ಹಾಗೂ ಸುಧಾ ಮೊರಬ ಸೇರಿದಂತೆ ಮುಂತಾದವರಿದ್ದರು.

Write A Comment